ಗುಂಡ್ಲುಪೇಟೆ: ಬಂಡೀಪುರ ಹುಲಿ ಯೋಜನೆಯ ಕಾಡಂಚಿನ ಚಿರಕನಹಳ್ಳಿ ಗ್ರಾಮದಲ್ಲಿ ಕಾಡಾನೆಗಳ ದಾಳಿಗೆ ಬೆಳೆ ನಾಶವಾಗಿದೆ. ಕುಂದಕೆರೆ ವಲಯದ ಅರಣ್ಯದಿಂದ ಗುರುವಾರ ನಸುಕಿನಲ್ಲಿ ಬಂದ ನಾಲ್ಕು ಆನೆಗಳು ಗ್ರಾಮದ ವೀರಭದ್ರಪ್ಪ ಅವರ ಜಮೀನಿಗೆ ದಾಳಿ ನಡೆಸಿ, ಗೊನೆ ಬಿಡಲು ಸಿದ್ಧವಾಗಿದ್ದ ಬಾಳೆ, ಟೊಮ್ಯಾಟೊ ಮುಂತಾದ ಬೆಳೆಗಳನ್ನು ತಿಂದು, ಕಿತ್ತುಹಾಕಿ ನಾಶಪಡಿಸಿವೆ.
ಕಾಡಂಚಿನಲ್ಲಿ ಅಳವಡಿಸಿರುವ ಸೋಲಾರ್ ಬೇಲಿಗಳನ್ನು ಸರಿಯಾಗಿ ನಿರ್ವಹಣೆ ಮಾಡದ ಪರಿಣಾಮ ವನ್ಯಜೀವಿಗಳ ದಾಳಿಯಿಂದ ಬೆಳೆ ನಾಶವಾಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳೆನಷ್ಟಕ್ಕೆ ಪರಿಹಾರ ಕೊಡಬೇಕು. ಆನೆಗಳ ದಾಳಿಯನ್ನು ತಡೆಗಟ್ಟಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.