ಸರಗೂರು: ತಾಲೂಕಿನ ಹೂವಿನಕೊಳ ಗ್ರಾಮದಲ್ಲಿ ಸೋಮವಾರ ರಾತ್ರಿ ಕಾಡಾನೆಗಳ ದಾಳಿಯಿಂದ ಬಾಳೆ ತೋಟ ನಾಶವಾಗಿದೆ.
ಸರಗೂರು ತಾಲೂಕಿನ ಮನುಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದ ಬಾಳೆ ತೋಟಕ್ಕೂ ನುಗ್ಗಿ ನಾಶಪಡಿಸಿದ್ದು, ಲಕ್ಷಾಂತರ ರೂ.ನಷ್ಟವಾಗಿದೆ.
ಹೂವಿನಕೊಳ ಗ್ರಾಮದ ಭಾಗ್ಯಾ, ನಂಜಮಣಿ, ಸತೀಶ್ ಎಂಬುವರಿಗೆ ಸೇರಿದ 9 ಎಕರೆ ಜಮೀನಿನಲ್ಲಿ ಬಾಳೆ ತೋಟವನ್ನು ತಿಂದು ತುಳಿದು ಹಾಕಿವೆ. ಚಿಕ್ಕದೇವಮ್ಮನ ಬೆಟ್ಟಕ್ಕೆ ಹೊಂದಿಕೊಂಡ ಕಾಡಿನಿಂದ ಐದು ಆನೆಗಳು ತೋಟಕ್ಕೆ ನುಗ್ಗಿ, ಕಟಾವಿಗೆ ಬಂದಿದ್ದ ಬಾಳೆ ಗಿಡಗಳನ್ನು ತಿಂದಿವೆ.
ಆನೆಗಳು ಜಮೀನಿಗೆ ದಾಳಿ ನಡೆಸುತ್ತಿರುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ನಿರ್ಲಕ್ಷೃ ವಹಿಸಿದ್ದಾರೆ. ಇದೇ ರೀತಿ ಮುಂದುವರಿದರೆ ಇಲಾಖೆ ಅಧಿಕಾರಿಗಳ ವಿರುದ್ಧ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಬೇಗುತ್ತದೆ ಎಂದು ರೈತರು ಎಚ್ಚರಿಸಿದ್ದಾರೆ.
ಗ್ರಾಮಸ್ಥರಾದ ಶಿವಣ್ಣ, ದೊಡ್ಡಯ್ಯ, ನಾಗರಾಜು, ಸಂತೋಷ್, ಕರ್ನಾಟಕ ಭೀಮಾ ಸೇನೆ ತಾಲೂಕು ಅಧ್ಯಕ್ಷ ಮಹೇಂದ್ರ, ಶರತ್, ಅಗ್ನಿ, ಸತೀಶ್ ಇತರರು ಇದ್ದರು.