ನಾಪೋಕ್ಲು: ವಿರಾಜಪೇಟೆ ಅರಣ್ಯ ವಲಯ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಕಾಡಾನೆಗಳ ಉಪಟಳದಿಂದ ಬೆಳೆಗಾರರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದು ಕಾಡಾನೆಗಳನ್ನು ಕಾಡಿಗಟ್ಟಲು ಹರಸಾಹಸ ಪಡುವಂತಾಗಿದೆ.
ಸಮೀಪದ ಮರಂದೋಡ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು ಗ್ರಾಮಸ್ಥರು ಸಂಕಷ್ಟ ಅನುಭವಿಸುತ್ತಿದ್ದಾರೆ. ಮಂಗಳವಾರ ಅರಣ್ಯ ಇಲಾಖೆಯ ಸಹಯೋಗದೊಂದಿಗೆ 10 ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಸಲಾಗಿತ್ತು. ಬುಧವಾರ ಮತ್ತೆ ಕಾಡಾನೆಗಳು ಮರಂದೋಡ ಗ್ರಾಮದ ಮುಕ್ಕಾಟಿರ ಪ್ರಕಾಶ್ ಅವರ ತೋಟದ ಗೇಟ್ ಹಾಗೂ ಗ್ರಾಮದ ಶಾಲೆಯ ಗೇಟ್ ಅನ್ನು ಕೂಡ ಜಖಂಗೊಳಿಸಿವೆ. ತೋಟಗಳಲ್ಲಿ ಅಡ್ಡಾಡುತ್ತಿದ್ದ ಕಾಡಾನೆಗಳನ್ನು ಬುಧವಾರ ಮತ್ತೆ ಕಾಡಿಗಟ್ಟಲಾಗಿದೆ.
ಅರಣ್ಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎ.ನೆಹರು ಮಾರ್ಗದರ್ಶನದಲ್ಲಿ ವಿರಾಜಪೇಟೆ ವಲಯ ಅರಣ್ಯಾಧಿಕಾರಿ ಕಳ್ಳಿರದೇವಯ್ಯ, ಅರಣ್ಯ ಆನೆಕ್ಷಿಪ್ರ ಕಾರ್ಯಪಡೆ ತಂಡ ಕೆದಮುಳ್ಳೂರು, ಚೆಯ್ಯಂಡಾಣೆ ಕ್ಯಾಂಪ್ ಸಿಬ್ಬಂದಿ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.