ಜಿಲ್ಲೆ

ಕಾಡಾನೆ ಹಾವಳಿ ನಿಯಂತ್ರಣಕ್ಕೆ ಕೇಂದ್ರದ ನೆರವು ಯಾಚಿಸಿದ ಸಂಸದ

ಹಾಸನ: ಕಾಡಾನೆ ಸಮಸ್ಯೆಯಿಂದಾಗಿ ಹಾಸನ ಜಿಲ್ಲೆಯ ಬೇಲೂರು ಹಾಗೂ ಸಕಲೇಶಪುರದ ರೈತರು ನಲುಗಿ ಹೋಗಿದ್ದು ಕೂಡಲೇ ಕೇಂದ್ರ ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎಂದು ಸಂಸದ ಶ್ರೇಯಸ್ ಪಟೇಲ್ ಆಡಳಿತಾರೂಢ ಎನ್‌ಡಿಎ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಬುಧವಾರ ಸಂಸತ್ ಅಧಿವೇಶನದಲ್ಲಿ ತಮಗೆ ಸಿಕ್ಕ ಅಲ್ಪ ಸಮಯದಲ್ಲಿಯೇ ಕಾಡಾನೆ ಸಮಸ್ಯೆಯ ಬಗ್ಗೆ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದ ಸಂಸದ ಶ್ರೇಯಸ್, ಜಿಲ್ಲೆಯ ಬೇಲೂರು ಹಾಗೂ ಸಕಲೇಶಪುರದಲ್ಲಿ ಕಾಡಾನೆ ಸಮಸ್ಯೆ ಕೈ ಮೀರಿದ್ದು, ಕಳೆದ 25 ವರ್ಷಗಳಲ್ಲಿ 80ಕ್ಕೂ ಅಧಿಕ ಜನರು ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾರೆ. ರೈತರು ಬೆಳೆಗಳನ್ನು ಬೆಳೆಯಲಾಗದೆ, ಕಾಡಾನೆ ಹಾವಳಿಯಿಂದ ತಮ್ಮ ಜೀವವನ್ನು ಉಳಿಸಿಕೊಳ್ಳಲು ಪರಿತಪಿಸುತ್ತಿದ್ದಾರೆ. ಕಾಡಾನೆಗಳ ಸ್ಥಳಾಂತರ ತಾತ್ಕಾಲಿಕ ಕಾರ್ಯವಾಗಿದ್ದು, ಕೇಂದ್ರ ಸರ್ಕಾರ ಇದಕ್ಕೆ ಶಾಶ್ವತ ಪರಿಹಾರವನ್ನು ಒದಗಿಸಬೇಕೆಂದು ಕೇಳಿಕೊಂಡರು.

ಕಾಡಾನೆ ಹಾವಳಿ ತಪ್ಪಿಸಲು ವಿಶೇಷ ಅನುದಾನವನ್ನು ಎನ್‌ಡಿಆರ್‌ಎಸ್ ನಿಧಿ ಅಡಿಯಲ್ಲಿ ನೀಡುವಂತೆ ಸಂಸದರು ಇದೇ ವೇಳೆ ವಿನಂತಿಸಿದರೆಲ್ಲದೆ ಅರಣ್ಯ ಇಲಾಖೆ ಮೂಲಕ ಶಾಶ್ವತ ಕ್ರಮಕ್ಕೆ ಕೇಂದ್ರವನ್ನು ಅಗ್ರಹಿಸಿದರು.