ಚಿಕ್ಕಮಗಳೂರು: ಕಾಡಾನೆ ಬೀಟಮ್ಮ ಗ್ಯಾಂಗ್ ಸ್ಥಳಾಂತರಕ್ಕೆ ಒತ್ತಾಯಿಸಿ ಅರಣ್ಯ ಇಲಾಖೆಯ ಡಿಎಫ್‌ಓ ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ರೈತ ಸಂಘದ ಕಾರ್ಯಕರ್ತರು ಬುಧವಾರ ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ ನಡೆಸಿದರು.
ನಗರದ ತಾಲೂಕು ಕಚೇರಿಯಿಂದ ಆಜಾದ್ ಪಾರ್ಕ್ ವೃತ್ತದವರೆಗೆ ಪ್ರತಿಭಟನ ಮೆರವಣಿಗೆ ನಡೆಸಿದ ಕಾರ್ಯಕರ್ತರು ಆಜಾದ್ ಪಾರ್ಕ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಾಡಾನೆ ದಾಳಿಯಿಂದಾಗಿ ಚಿಕ್ಕಮಗಳೂರು ತಾಲೂಕಿನ ಮಲೆನಾಡು ಭಾಗದ ರೈತರು ಕಂಗಾಲಾಗಿದ್ದಾರೆ. ಏಕ ಕಾಲಕ್ಕೆ ೨೫ಕ್ಕೂ ಹೆಚ್ಚು ಆನೆಗಳು ದಾಳಿ ನಡೆಸುತ್ತಿರುವುದರಿಂದ ಈಗಾಗಲೇ ನೂರಾರು ಎಕರೆ ಕಾಫಿ, ಬಾಳೆ, ಅಡಕೆ, ಜೋಳ, ಶುಂಠಿ, ಭತ್ತದ ಬೆಳೆಗೆ ಹಾನಿಯಾಗಿ ಕೋಟ್ಯಂತರ ರೂ. ನಷ್ಟ ಸಂಭವಿಸಿದೆ. ಕೂಡಲೇ ಆನೆಗಳನ್ನು ವೈಜ್ಞಾನಿಕ ಪದ್ಧತಿ ಅನುಸರಿಸಿ ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿದರು.
೨೬ ಆನೆಗಳ ಹಾವಳಿಯಿಂದ ಹೈರಾಣಾಗಿರೋ ಮಲೆನಾಡಿಗರಿಗೆ ಅಡಿಕೆ, ಕಾಫಿ-ಮೆಣಸು, ಬಾಳೆ-ಭತ್ತ ಯಾವ ಬೆಳೆಯನ್ನೂ ಬಿಡದೆ ಆನೆಗಳ ಹಿಂಡು ನಾಶಪಡಿಸುತ್ತಿವೆ. ಚಿಕ್ಕಮಗಳೂರು ತಾಲೂಕಿನಲ್ಲೇ ಬೀಡು ಬಿಟ್ಟಿರುವ ಆನೆಗಳ ಹಿಂಡು ಕಾಫಿ ಗಿಡಗಳನ್ನು ಬುಡಸಮೇತ ಕಿತ್ತು ಹಾಕುತ್ತಿವೆ. ಇದು ಹೀಗೇ ಮುಂದುವರಿದರೆ ಕಾಫಿ ಬೆಳೆಯುವುದನ್ನೇ ಬಿಡಬೇಕಾದ ದುಸ್ಥಿತಿ ಬರಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕಮಗಳೂರು ನಗರದ ಸುತ್ತಳತೆಯಲ್ಲೇ ಕಾಡಾನೆಗಳ ಹಿಂಡು ಇವೆ. ಕೂಡಲೇ ಆನೆ ಹಾವಳಿಗೆ ಬ್ರೇಕ್ ಹಾಕಬೇಕು. ಆನೆ ದಾಳಿಯಿಂದ ಆಗುವ ಬೆಳೆ ಹಾನಿಗೆ ದಯಾ ಪರಿಹಾರ ನೀಡುವ ಬದಲು ವೈಜ್ಞಾನಿಕವಾಗಿ ಪರಿಹಾರ ನೀಡಬೇಕು. ಮುಂದೆ ಆನೆಗಳು ಬಾರದಂತೆ ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಆನೆ ಹಾವಳಿಯಿಂದ ನಿರಂತರವಾಗಿ ಬೆಳೆಹಾನಿ ಸಂಭವಿಸುತ್ತಿದೆ. ಆನೆಗಳು ಇರುವ ಕಾರಣಕ್ಕೆ ಕಾಫಿ ತೋಟಗಳಿಗೆ ಕೆಲಸ ಮಾಡಲು ಕಾರ್ಮಿಕರು ಒಪ್ಪುತ್ತಿಲ್ಲ. ಒಂದು ವೇಳೆ ಆನೆ ದಾಳಿಯಿಂದ ಜೀವ ಹಾನಿ ಸಂಭವಿಸಿz್ದೆÃ ಆದಲ್ಲಿ ಅರಣ್ಯ ಇಲಾಖೆ ಕಚೇರಿ ಎದುರೇ ಅಂತ್ಯ ಸಂಸ್ಕಾರ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಮಹೇಶ್, ತಾಲೂಕು ಅಧ್ಯಕ್ಷ ವೈ.ಸಿ.ಸುನೀಲ್‌ಕುಮಾರ್, ಪ್ರಮುಖರಾದ ಪ್ರದೀಪ್, ಹೊನ್ನೇಗೌಡ, ಆದರ್ಶ, ಲೋಕೇಗೌಡ, ಬಾಣಾವರ ಯಶವಂತ್ ಮತ್ತಿತರರಿದ್ದರು.