ಜಿಲ್ಲೆ

ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಬದ್ಧ: ಶಾಸಕ ಸಿಮೆಂಟ್ ಮಂಜು

ಹಾಸನ: ಆಲೂರು - ಸಕಲೇಶಪುರ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಅವುಗಳನ್ನು ಹಂತ ಹಂತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ನೂತನ ಶಾಸಕ ಸಿಮೆಂಟ್ ಮಂಜು ಭರವಸೆ ನೀಡಿದರು.

ನನ್ನ ಕ್ಷೇತ್ರ ಭೌಗೋಳಿಕ ವಿಸ್ತೀರ್ಣದಲ್ಲಿ ದೊಡ್ಡದಾಗಿದ್ದು, ಇಲ್ಲಿ ಪ್ರಮುಖವಾಗಿ ಕಾಡಾನೆ ಸಮಸ್ಯೆ ಹಲವು ದಶಕಗಳಿಂದ ಇದ್ದು, ನನ್ನ ಅಧಿಕಾರಾವಧಿಯಲ್ಲಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇದರ ಜತೆಗೆ ಕ್ಷೇತ್ರದಲ್ಲಿ ಕುಡಿಯುವ ನೀರು, ರಸ್ತೆ ಸೇರಿದಂತೆ ಹಲವು ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲ. ಇವುಗಳ ಬಗ್ಗೆ ಹೆಚ್ಚು ಗಮನಹರಿಸಲಾಗುತ್ತಿದೆ. ಪ್ರತಿಯೊಂದು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಸಮಸ್ಯೆಗಳನ್ನು ತಿಳಿದುಕೊಳ್ಳಲಾಗುತ್ತಿದ್ದು, ಶೀಘ್ರದಲ್ಲಿ ಇವುಗಳಿಗೆ ಪರಿಹಾರ ಕಂಡು ಹಿಡಿಯಲಾಗುವುದು ಎಂದು ಹೇಳಿದರು.

ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿ ಕುಂಟುತ್ತಾ ಸಾಗುತ್ತಿದ್ದು, ಇನ್ನೇನು ಮಳೆಗಾಲ ಪ್ರಾರಂಭವಾಗಲಿದೆ. ಹೆದ್ದಾರಿಯನ್ನು ಬಂದ್ ಮಾಡುವ ಬಗ್ಗೆ ಪ್ರಸ್ತಾಪವಾಗುತ್ತಿದೆ. ಈ ಸಂಬಂಧ ಕೇಂದ್ರದ ಅಧಿಕಾರಿಗಳೊಂದಿಗೆ ಸಂಸದ ಪ್ರತಾಪ್ ಸಿಂಹ ಮಾತನಾಡಿದ್ದು, ಅವರು ಇನ್ನು 15 ದಿನದಲ್ಲಿ ತಾಲ್ಲೂಕಿಗೆ ಆಗಮಿಸಲಿದ್ದಾರೆ. ಪ್ರತಿ ವರ್ಷ ಮಳೆಯಾದ ಸಂದರ್ಭದಲ್ಲಿ ಸಾಕಷ್ಟು ಹಾನಿಯಾಗುತ್ತದೆ. ರಸ್ತೆ ಬಂದ್ ಮಾಡುವುದರಿಂದ ವ್ಯಾಪಾರಿಗಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ಬಂದ್ ಮಾಡಿದರೆ ಪರ‌್ಯಾಯ ಮಾರ್ಗದ ಬಗ್ಗೆ ಚಿಂತಿಸಲಾಗುತ್ತಿದೆ. ಅದು ಕೂಡ ಹೆಚ್ಚು ಮಳೆ ಮತ್ತು ವಾಹನಗಳ ದಟ್ಟಣೆಯಿಂದ ಅಪಾಯವಿದೆ. ಈ ಬಗ್ಗೆಯೂ ಕೂಡ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.

ತಾಲ್ಲೂಕಿನಲ್ಲಿರುವ ಕ್ರಾಫರ್ಡ್ ಆಸ್ಪತ್ರೆಯ ಅವ್ಯವಸ್ಥೆಗಳ ಬಗ್ಗೆ ಗಮನಹರಿಸಿದ್ದು, ಈಗಾಗಲೇ ಭೇಟಿ ನೀಡಿ ಸಮಸ್ಯೆಗಳ ಪಟ್ಟಿ ನೀಡಲು ಸೂಚನೆ ನೀಡಲಾಗಿದೆ. ಶೀಘ್ರದಲ್ಲೇ ಸಚಿವರು ಮತ್ತು ರಾಜ್ಯಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಕಾರ್ಯಾಧ್ಯಕ್ಷ ಲೋಹಿತ್ ಮಾತನಾಡಿ, ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು 9 ವರ್ಷ ಕಳೆದಿದೆ. ಹಲವು ಯೋಜನೆಗಳನ್ನು ಜಾರಿಗೆ ತರುವ ಮೂಲಕ ದೇಶದ ಸಮಗ್ರ ಅಭಿವೃದ್ಧಿಯಾಗುತ್ತಿದ್ದು, ವಿಶ್ವಮಟ್ಟದಲ್ಲಿ ದೇಶವನ್ನು ಗುರುತಿಸುವ ಕೆಲಸವಾಗುತ್ತಿದೆ. ದೇಶದ ಆಂತರಿಕ ಭದ್ರತೆ, ಕೋವಿಡ್ ಲಸಿಕೆ, ಜನ್‌ಧನ್ ಖಾತೆಗೆ ಹಣ ವರ್ಗಾವಣೆ, ಕೃಷಿ ಸಮ್ಮಾನ್ ಯೋಜನೆ ಸೇರಿದಂತೆ ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.

ಜೂ. 21ರಂದು ವಿಶ್ವ ಯೋಗ ದಿನಾಚರಣೆ ಘೋಷಿಸಲಾಗಿದ್ದು, ಇದರ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಮತ್ತು ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಮತ್ತು ಕೈಗೊಂಡಿರುವ ಯೋಜನೆಗಳ ಬಗ್ಗೆ ಕರಪತ್ರ ಹಂಚಲಾಗುವುದು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಪ್ರವೀಣ್, ಪ್ರಕಾಶ್, ಐನೆಟ್ ವಿಜಿ ಸೇರಿದಂತೆ ಇನ್ನಿತರರು ಇದ್ದರು.