ನಾಪೋಕ್ಲು: ಸಮೀಪದ ಯವಕಪಾಡಿ ಗ್ರಾಮದಲ್ಲಿ ಕಾಡಾನೆ ತೆಂಗಿನ ಮರವನ್ನು ಬೀಳಿಸಿ ಮನೆಗೆ ಅಪಾರ ಹಾನಿ ಉಂಟು ಮಾಡಿದೆ.
ಕಕ್ಕಬೆ ಕುಂಜಿಲ ಗ್ರಾಮ ಪಂಚಾಯಿತಿಯ ಯವಕಪಾಡಿ ಗ್ರಾಮದ ಕುಡಿಯರ ಕಾಲನಿಯಲ್ಲಿ ಇತ್ತೀಚೆಗೆ ಕಾಡಾನೆ ದಾಂಧಲೆ ನಡೆಸಿ ಗ್ರಾಮದ ನಿವಾಸಿ ಕುಡಿಯರ ಗಣೇಶ್ ಅವರ ಮನೆಯ ಮೇಲೆ ತೆಂಗಿನಮರವನ್ನು ಬೀಳಿಸಿದ್ದು, ಇದರಿಂದ ಮನೆಯ ಒಂದು ಭಾಗ ಸಂಪೂರ್ಣ ಹಾನಿ ಆಗಿದೆ. ಮನೆಯ ಸುತ್ತಮುತ್ತ ಅಡ್ಡಾಡಿ ಗಿಡಗಳನ್ನು ತಿಂದು ನಷ್ಟವನ್ನುಂಟು ಮಾಡಿದೆ.
ಕುಟುಂಬದವರು ಕಾರ್ಯನಿಮಿತ್ತ ಬೇರೆಡೆ ತೆರಳಿದ್ದರಿಂದ ಮನೆಯಲ್ಲಿ ಯಾರೂ ಇಲ್ಲದ ಕಾರಣ ಅಪಾಯದ ಪಾರಾಗಿದ್ದಾರೆ.
ಬಿರುಸಿನ ಮಳೆ ಇದ್ದುದರಿಂದ ಕುಟುಂಬದವರು ಕೆಲಸದ ನಿಮಿತ್ತ ಬೇರೆಡೆ ತೆರಳಿದ್ದರಿಂದ ಮನೆ ಖಾಲಿ ಇತ್ತು. ಮುತ್ತಜ್ಜನ ಕಾಲದ ಮನೆಯನ್ನು ಕಾಡಾನೆ ಧ್ವಂಸಗೊಳಿಸಿದೆ. ಸರ್ಕಾರ ಕಾಲನಿಗೆ ರಸ್ತೆ ನಿರ್ಮಿಸಿದ್ದು ಬಿಟ್ಟರೆ ಕಾಡುಪ್ರಾಣಿಗಳಿಂದ ಉಂಟಾಗುವ ಉಪಟಳದ ಬಗ್ಗೆ ಯಾವುದೇ ಪರಿಹಾರ ನೀಡುತ್ತಿಲ್ಲ. ಕಾಡುಪ್ರಾಣಿಗಳಿಂದ ಬಡಜನರು ಸಮಸ್ಯೆಅನುಭವಿಸುತ್ತಿದ್ದು ಸರ್ಕಾರಕ್ಕೆ ಕಾಳಜಿ ಇಲ್ಲ ಎಂದು ಸಂತ್ರಸ್ತ ಕುಡಿಯರ ಗಣೇಶ್ ಅವರ ಸಹೋದರ ಕುಡಿಯರ ಬಿದ್ದಪ್ಪ ಆರೋಪಿಸಿದರು
ಮಡಿಕೇರಿ ತಾಲೂಕು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕುಡಿಯರ ಮುತ್ತಪ್ಪ ಮಾತನಾಡಿ, ಎರಡು ವರ್ಷದಿಂದ ಈ ಭಾಗದಲ್ಲಿ ವಾಸಿಸುವವರ ಮನೆ ಆಸ್ತಿ ನಾಶವಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಯವಕಪಾಡಿ, ಮರಂದೋಡ, ಕುಂಜಿಲ ಸೇರಿದಂತೆ ವಿವಿಧ ಗ್ರಾಮಗಳಲ್ಲಿನ ಕಾಫಿ ತೋಟಗಳು ಹಾನಿಯಾಗಿವೆ. ಒಂಟಿ ಸಲಗವನ್ನು ಹಿಡಿಯಲು ಕೇಂದ್ರ ಸರ್ಕಾರದಿಂದ ಆದೇಶವಾಗಿದ್ದರೂ ಅರಣ್ಯ ಇಲಾಖೆ ಆನೆ ಸೆರೆಹಿಡಿಯಲು ವಿಫಲವಾಗಿದೆ. ಆನೆ ದಾಳಿಯಿಂದ ಹಾನಿಗೊಳಗಾದ ಮನೆಯನ್ನು ಪುನಃ ನಿರ್ಮಿಸಲು ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಅಗತ್ಯವಿದೆ. ಹತ್ತು ಲಕ್ಷ ರೂ.ಪರಿಹಾರ ನೀಡುವಂತೆ ಒತ್ತಾಯಿಸಿದರು.
ಕಕ್ಕಬೆ ಕುಂಜಿಲ ಗ್ರಾಮ ಪಂಚಾಯಿತಿ ಸದಸ್ಯ ಕುಡಿಯರ ಭರತ್‌ಚಂದ್ರ ದೇವಯ್ಯ ಮಾತನಾಡಿ, ಮನೆ ಮೇಲೆ ಮರಬಿದ್ದು ನಷ್ಟ ಸಂಭವಿಸಿದೆ. ಕಾಡಾನೆಗಳ ಉಪಟಳದಿಂದ ಸಂಕಷ್ಟ ಅರಿಯಲು ಅರಣ್ಯ ಇಲಾಖೆ ಸಿಬ್ಬಂದಿ ಯಾರೂ ಆಗಮಿಸಿಲ್ಲ. ಸ್ಥಳದಲ್ಲೇ ಪರಿಹಾರ ನೀಡುವ ಕಾರ್ಯ ಆಗಬೇಕು ಎಂದು ಒತ್ತಾಯಿಸಿದ್ದಾರೆ.