ಹನೂರು: ತಾಲೂಕಿನ ಕೊಪ್ಪ ಗ್ರಾಮದಿಂದ ಒಡೆಯರಪಾಳ್ಯಕ್ಕೆ ಸೋಮವಾರ ಸಂಜೆ ಅರಣ್ಯ ಪ್ರದೇಶದ ದಾರಿಯಲ್ಲಿ ತೆರಳುತ್ತಿದ್ದ ಇಬ್ಬರ ಮೇಲೆ ಕಾಡಾನೆ ದಾಳಿ ನಡೆಸಿದ್ದು, ಈ ಪೈಕಿ ಒಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೊಪ್ಪ ಗ್ರಾಮದ ನಿವಾಸಿ ಮುನಿಯಪ್ಪ (40) ಮೃತರು. ಇದೇ ಗ್ರಾಮದ ಸ್ನೇಹಿತ ಕುಳ್ಳುಚ್ಚೇಗೌಡ ಗಾಯಗೊಂಡವರು. ಈ ಇಬ್ಬರೂಒಡೆಯರಪಾಳ್ಯ ಗ್ರಾಮದ ಜಮೀನೊಂದರಲ್ಲಿ ಹಲವು ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡಿದ್ದು, ಕಾರ್ಯನಿಮಿತ್ತ ಗ್ರಾಮಕ್ಕೆ ಆಗಮಿಸಿ ಸಂಜೆ ಅರಣ್ಯ ಪ್ರದೇಶದ ದಾರಿಯಲ್ಲಿ ಒಡೆಯರಪಾಳ್ಯಕ್ಕೆ ತೆರಳುತ್ತಿದ್ದರು. ಈ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಮುನಿಯಪ್ಪ ಸ್ಥಳದಲ್ಲೇ ಮೃತಪಟ್ಟರೆ, ಕುಳ್ಳಚ್ಚೇಗೌಡ ತೀವ್ರ ಗಾಯಗೊಂಡು ಪ್ರಜ್ಞೆ ಇಲ್ಲದ ಸ್ಥಿತಿಯಲ್ಲಿ ಬಿದ್ದಿದ್ದರು. ಮಂಗಳವಾರ ಗಸ್ತಿನಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಇವರನ್ನು ಕಂಡು ಈ ವಿಚಾರವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರು. ನಂತರ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಪರಿಶೀಲಿಸಿ ಕುಳ್ಳುಚ್ಚೇಗೌಡ ಅವರನ್ನು ಚಿಕಿತ್ಸೆಗಾಗಿ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದರು. ಮುನಿಯಪ್ಪ ಅವರ ಮೃತದೇಹವನ್ನು ವೈದ್ಯರಿಂದ ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ನೀಡಲಾಯಿತು.