ಜಿಲ್ಲೆ

ಕಾಡಾನೆ ದಾಳಿಗೆ ಕಾರ್ಮಿಕನಿಗೆ ಗಾಯ

ಮೂಡಿಗೆರೆ: ಬೈದುವಳ್ಳಿ ಕಾಫಿ ತೋಟದಲ್ಲಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಕಾರ್ಮಿಕ ದಿನೇಶ್ (37) ಎಂಬುವರ ಮೇಲೆ ಕಾಡಾನೆ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದೆ.

ಬೈದುವಳ್ಳಿ ಮೂರ್ತೇಶ್ ಎಂಬುವವರ ತೋಟಕ್ಕೆ ಕೆಲಸಕ್ಕೆ ತೆರಳಿದ್ದ ಹೆಸಗಲ್ ಗ್ರಾಮದ ದಿನೇಶ್ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ತೋಟದ ಕೆಲಸ ಮುಗಿಸಿ ಮನೆಗೆ ವಾಪಸಾಗುತ್ತಿದ್ದಾಗ ಕಾಡಾನೆ ಸೊಂಡಿಲಿನಿಂದ ಎತ್ತಿ ದೂರಕ್ಕೆ ಬಿಸಾಡಿದೆ. ನಂತರ ಅದೇ ಸ್ಥಳದಲ್ಲಿ ಕೆಲ ಹೊತ್ತು ನಿಂತಿದ್ದ ಕಾಡಾನೆ ಬಂದ ದಾರಿಯಲ್ಲಿ ವಾಪಸಾಗಿದೆ.

ಕಾಡಾನೆ ಎತ್ತಿ ಎಸೆದ ರಭಸಕ್ಕೆ ದಿನೇಶ್ ಅವರ ಬೆನ್ನು, ಕುತ್ತಿಗೆ ಮತ್ತು ತಲೆಗೆ ತೀವ್ರ ಗಾಯವಾಗಿದೆ. ದಿನೇಶ್ ಅವರೊಂದಿಗಿದ್ದ ತೋಟದ ಮಾಲೀಕ ಮೂರ್ತೇಶ್ ಮತ್ತು ಇತರ ಕಾರ್ಮಿಕರು ಓಡಿಹೋಗಿ ತಪ್ಪಿಸಿಕೊಂಡಿದ್ದಾರೆ. ದಿನೇಶ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆರ್‌ಎಫ್‌ಒ ಕಾವ್ಯಾ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದರು.