ಸಕಲೇಶಪುರ: ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವಂತೆ ಆಗ್ರಹಿಸಿ ವಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಹಿರಿಯೂರು ಕೂಡಿಗೆ ರಸ್ತೆ ಸಂಚಾರ ಬಂದ್ ಮಾಡಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಎರಡು ದಶಕಗಳಿಂದ ವಳಲಹಳ್ಳಿ ಗ್ರಾಪಂ, ಕಾಡಾನೆಗಳ ಬೀಡಾಗಿದ್ದು ಹತ್ತಾರು ಸಾವುಗಳು ಸಂಭವಿಸಿದೆ. ಅಂದಿನಿಂದಲೂ ಕಾಡಾನೆ ಸ್ಥಳಾಂತರಕ್ಕೆ ಆಗ್ರಹಿಸಿ ಹತ್ತಾರು ಪ್ರತಿಭಟನೆ ನಡೆಸಿದರೂ ಶಾಸಕರಾಗಲಿ, ಸರ್ಕಾರಗಳಾಗಲಿ ಸ್ಪಂದಿಸುತ್ತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಗ್ರಾಪಂ ವ್ಯಾಪ್ತಿಯ ಮರ್ಕಳ್ಳಿ, ಕಿರ್ಕಳ್ಳಿ,ಬೊಬ್ಬನಹಳ್ಳಿ, ವಳಲಹಳ್ಳಿ, ಕರಿಡಗಾಲ, ಬೊಮ್ಮನಕೆರೆ, ಕಲ್ಲತೋಟ ಸೇರಿದಂತೆ ಹಲವು ಗ್ರಾಮಗಳಲ್ಲಿ ಕಾಡಾನೆ ಉಪಟಳ ಮಿತಿಮೀರಿದೆ.
ರಾತ್ರಿ ವೇಳೆ ಮಾತ್ರ ಸಂಚರಿಸುತ್ತಿದ್ದ ಕಾಡಾನೆಗಳು ಈಗ ಹಗಲುವೇಳೆ ಗ್ರಾಮದೊಳಗೆ ನಿರ್ಭಯವಾಗಿ ಸಂಚರಿಸುತ್ತಾ ಬೆಳೆಹಾನಿಯಲ್ಲಿ ತೊಡಗಿವೆ. ಈ ಭಾಗದ ರೈತರು ಮನೆಯಿಂದ ಹೊರಹೋದರೆ ಮನೆಗೆ ಬರುವುದು ಖಾತ್ರಿ ಇಲ್ಲದಂತಾಗಿದೆ. ಹತ್ತಾರು ಆನೆಗಳ ಹಿಂಡು ಏಕಕಾಲಕ್ಕೆ ಕಾಫಿ, ಏಲಕ್ಕಿತೋಟ ಹಾಗೂ ಭತ್ತದ ಗದ್ದೆಗಳಿಗೆ ಲಗ್ಗೆ ಇಡುತ್ತಿರುವುದರಿಂದ ವ್ಯಾಪಕ ಬೆಳೆಹಾನಿ ಸಂಭವಿಸುತ್ತಿದೆ. ಪರಿಣಾಮ ಈ ಭಾಗದಲ್ಲಿ ಸಾಕಷ್ಟು ಭತ್ತದ ಗದ್ದೆಗಳನ್ನು ಪಾಳುಬಿಡಲಾಗುತಿದೆ. ಇದರಿಂದಾಗಿ ಭತ್ತದ ಗದ್ದೆಗಳಿದ್ದರೂ ಅಂಗಡಿಯಿಂದ ಅಕ್ಕಿತಂದು ತಿನ್ನುವ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಡಾನೆ ತುಳಿದು ಮೃತಪಟ್ಟ ರೈತನ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ನೀಡುತ್ತಿದೆ. ಆದರೆ, ಸರ್ಕಾರಿ ಅಧಿಕಾರಿಗಳು ಮೃತಪಟ್ಟರೆ 50 ಲಕ್ಷ ರೂ. ಗೂ ಅಧಿಕ ಪರಿಹಾರ ನೀಡುತ್ತಾರೆ ಇದರಲ್ಲೂ ರೈತರ ಶೋಷಣೆ ಮಾಡಲಾಗುತ್ತಿದೆ. ಹತ್ತಾರು ವರ್ಷ ಕಷ್ಟಪಟ್ಟು ಬೆಳೆದ ಕಾಫಿಗಿಡಗಳು ಕಾಡಾನೆ ದಾಳಿಯಿಂದ ನಾಶವಾದರೆ ನೀಡುವ ಪರಿಹಾರ ಸಹ ಅವೈಜ್ಞಾನಿಕವಾಗಿದೆ. ಮರಕಡಿದರೆ ತಕ್ಷಣ ಸ್ಥಳಕ್ಕೆ ಬರುವ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆ ಬಗ್ಗೆ ಮಾಹಿತಿ ನೀಡಿದರೆ ನಿರ್ಲಕ್ಷ್ಯತೊರುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ಚುನಾವಣೆ ಬಹಿಷ್ಕಾರ: ರಾಜಕೀಯಕ್ಕಿಂತ ದೇಶದ ಬೆನ್ನಲುಬಾಗಿರುವ ರೈತರ ಹಿತ ಮುಖ್ಯ ಆದ್ದರಿಂದ ಕಾಡಾನೆ ಸಮಸ್ಯೆ ಪರಿಹಾರಿಸಲು ಸರ್ಕಾರ ಗಂಬೀರ ಚಿಂತನೆ ನಡೆಸದಿರುವುದು ಹಾಗೂ ಜನಪ್ರತಿನಿಧಿಗಳು ಸಹ ಸಮಸ್ಯೆಗೆ ರಿಯಾಗಿ ಸ್ಪಂದನೆ ಮಾಡದಿರುವುದನ್ನು ಖಂಡಿಸಿ ಮುಂಬರುವ ಚುನಾವಣೆ ಬಹಿಷ್ಕರಿಸುವುದು ಹಾಗೂ ಈ ಬಾರಿ ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರದ ಗಮನ ಸೇಳೆಯುವ ಕೆಲಸ ಮಾಡೋಣ ಎಂಬ ಆಗ್ರಹ ಕೇಳಿ ಬಂದಿತು.
ಪ್ರತಿಭಟನೆ ಅಂಗವಾಗಿ ಗ್ರಾಮದ ರಸ್ತೆಯಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಗ್ರಾಮದ ಅಂಗಡಿ ಮುಂಗಟ್ಟು ಗಳನ್ನು ಸ್ವಯಂ ಬಂದ್ ಮಾಡಿ ಪ್ರತಿಭಟನೆ ಬೆಂಬಲ ವ್ಯಕ್ತಪಡಿಸಿದರು. ಗ್ರಾಮದಲ್ಲಿನ ರಾಜ್ಯ ಹೆದ್ದಾರಿ 107ರಲ್ಲಿನ ಸಂಚಾರಕ್ಕೆ ತಡೆ ಒಡ್ಡಿ ಮುಂಜಾನೆ 11 ರಿಂದ ಮಧ್ಯಾಹ್ನ 3 ರವರಗೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಅರ್ಚನಾ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟಯಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟ,ಹಾಸನ ಬೆಳೆಗಾರರ ಸಂಘ, ಹೆತ್ತೂರು ಹೋಬಳಿ ಬೆಳೆಗಾರರ ಸಂಘ, ವಿವಿಧ ಕನ್ನಡಪರ ಸಂಘಟನೆಗಳು ಹಾಗೂ ಸ್ತ್ರೀಶಕ್ತಿ ಸಂಘಗಳ ಒಕ್ಕೂಟದ ಸದಸ್ಯರು ಬೆಂಬಲ ವ್ಯಕ್ತಪಡಿಸಿದ್ದರು. ವಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳೆಗಾರರ ಸಂಘದ ಅಧ್ಯಕ್ಷ ಸಿ.ಎಂ.ಬಾಲು, ಗ್ರಾ.ಪಂ. ಅಧ್ಯಕ್ಷೆ ರೇಣುಕಾ ಬೊಮ್ಮನಕೆರೆ, ಹಾಸನ ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ಸುಬ್ರಮಣ್ಯ, ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್, ಜಿಪಂ ಮಾಜಿ ಸದಸ್ಯೆ ಉಜ್ಮರುಜ್ವಿ ಸುದರ್ಶನ್, ಮುರುಳಿ ಮೋಹನ್, ಕರಡಿಗಾಲ ಕೃಷ್ಣೆಗೌಡ, ವಳಲಹಳ್ಳಿ ಅಶ್ವತ್ಥ ಬೆಕ್ಕಿನಹಳ್ಳಿ ನಾಗರಾಜ್ ಇತರರಿದ್ದರು.