ಎಚ್.ಎಂ.ಗಣೇಶ ಪ್ರಸಾದ್ 
ಜಿಲ್ಲೆ

ಕಾಡಂಚಿನ ಗ್ರಾಮಗಳಲ್ಲಿ ವನ್ಯಜೀವಿಗಳ ಹಾವಳಿ ತಡೆಗೆ ಕ್ರಮ: ಶಾಸಕ ಗಣೇಶ್ ಪ್ರಸಾದ್

ಮೈಸೂರು: ಕಾಡಂಚಿನ ಗ್ರಾಮಗಳಲ್ಲಿ ವನ್ಯಜೀವಿಗಳ ಹಾವಳಿ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನೆಗಳ ಹಾವಳಿ ತಡೆಗೆ ರೈಲ್ವೆ ಕಂಬಿ ತಡೆಬೇಲಿ ಜತೆಗೆ ಕಂದಕ(ಟ್ರೆಂಚ್) ತೋಡಲಾಗುತ್ತಿದೆ. ಕಾಡಂಚಿನ ಜನರು ತಮ್ಮ ಲಿಮಿಟ್ ಕ್ರಾಸ್ ಮಾಡಬಾರದು. ಅರಣ್ಯಕ್ಕೆ ಅತಿಕ್ರಮ ಪ್ರವೇಶ ಮಾಡಬಾರದು, ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.

ಕಾಂಗ್ರೆಸ್ ಶಾಸಕರ ಅಸಮಾಧಾನದ ಬಗ್ಗೆ ನೋ ಕಮೆಂಟ್ಸ್ ಎಂದ ಗಣೇಶ್ ಪ್ರಸಾದ್, ಆಡಳಿತರೂಢ ಕಾಂಗ್ರೆಸ್ ಪಕ್ಷದ ಆಂತರಿಕ ಬೆಳವಣಿಗೆ ಬಗ್ಗೆ ಕೆಲ ಹಿರಿಯ ಶಾಸಕರು ಮಾತನಾಡಿದ್ದಾರೆ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು.

ನಮ್ಮ ಕ್ಷೇತ್ರದಲ್ಲಿ ಬಡವರ ಮನೆ ಹಂಚಿಕೆ ಕಾರ್ಯ ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿದೆ. ಮನೆಗಳ ಹಂಚಿಕೆಯಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆದಿಲ್ಲ ಎಂದು ಪ್ರಶ್ನೆವೊಂದಕ್ಕೆ ಉತ್ತರಿಸಿದರು.

ಗುಂಡ್ಲುಪೇಟೆ ಕ್ಷೇತ್ರಕ್ಕೆ ರಾಜ್ಯ ಸರ್ಕಾರ ಸಾಕಷ್ಟು ಅನುದಾನ ನೀಡಿದೆ. ಇತ್ತೀಚೆಗೆ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ 110 ಕೆರೆಗಳನ್ನು ತುಂಬಿಸಲು 475 ಕೋಟಿ ರೂ. ಅನುದಾನ ನೀಡಲು ಒಪ್ಪಿಗೆ ದೊರೆತಿದೆ.

ಸಿಸಿ ರಸ್ತೆ ಕಾಮಗಾರಿಗೆ ಸಿಎಂ ಪರಿಹಾರ ನಿಧಿಯಿಂದ 25 ಕೋಟಿ ರೂ. ಅನುದಾನ ಬಂದಿದೆ. ಇದೇ ರೀತಿ ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಮಂಜೂರಾಗಿದೆ ಎಂದು ತಿಳಿಸಿದರು.