ಚಿಕ್ಕಬಳ್ಳಾಪುರ: ಜಿಲ್ಲಾಧಿಕಾರಿಗಳ ನಡೆ, ಗ್ರಾಮಗಳ ಕಡೆ ಘೋಷಣೆಯೊಂದಿಗೆ ಫೆ.20ರಂದು ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯ ಸಿದ್ಧತೆಗಳನ್ನು ಜಿಲ್ಲಾಧಿಕಾರಿ ಆರ್.ಲತಾ ಪರಿಶೀಲಿಸಿದರು. ಜಿಲ್ಲಾಡಳಿತ ಭವನದಲ್ಲಿ ಗುರುವಾರ ಜಿಲ್ಲೆಯ ತಹಸೀಲ್ದಾರ್‌ಗಳೊಂದಿಗಿನ ವಿಡಿಯೋ ಸಂವಾದದಲ್ಲಿ ಅಧಿಕಾರಿಗಳಿಂದ ಸಿದ್ಧತೆಯ ಮಾಹಿತಿ ಪಡೆದರು.
ಗ್ರಾಮ ವಾಸ್ತವ್ಯದ ಮೂಲಕ ಜಿಲ್ಲಾಡಳಿತ ಯಂತ್ರಾಂಗವೇ ಜನರ ಬಳಿಗೆ ತೆರಳಲಿದೆ. ಇದು ಕೇವಲ ಕಾಟಾಚಾರದ ಕಾರ್ಯಕ್ರಮವಾಗದೆ ಗ್ರಾಮಗಳ ಅಭಿವೃದ್ಧಿ ದೃಷ್ಟಿಯಲ್ಲಿ ಪ್ರಾಮಾಣಿಕ ಯಶಸ್ಸು ಪಡೆಯಬೇಕು ಎಂದು ಆಶಿಸಿದರು.
ಆಯಾ ತಾಲೂಕು ವ್ಯಾಪ್ತಿಯಲ್ಲಿ ನಡೆಯುವ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ಗಿಡ ನೆಡುವಿಕೆ, ಅರ್ಹ ಫಲಾನುಭವಿಗಳಿಗೆ ಸವಲತ್ತು ವಿತರಣೆ, ವಿವಿಧ ಇಲಾಖೆಗಳ ಕಾರ್ಯಕ್ರಮಗಳ ಅರಿವು ಮೂಡಿಸಲು ಮಳಿಗೆಗಳ ಸ್ಥಾಪನೆ ಸೇರಿ ಅಗತ್ಯ ಕ್ರಮ ಕೈಗೊಳ್ಳಬೇಕು. ನಿಗದಿತ ದಿನದಂದು ಬೆಳಗ್ಗೆ 10ಕ್ಕೆ ಎಲ್ಲ ಸಿಬ್ಬಂದಿ ಹಾಜರಿರಬೇಕು ಹಾಗೂ ಸವಲತ್ತು ವಿತರಣೆ ಕಾರ್ಯಕ್ರಮಕ್ಕೆ ಸ್ಥಳೀಯ ಜನಪ್ರತಿನಿಧಿಗಳನ್ನು ಆಹ್ವಾನಿಸುವಂತೆ ಉಪ ವಿಭಾಗಾಧಿಕಾರಿ ಎ.ಎನ್.ರಘುನಂದನ್ ಸೂಚಿಸಿದರು.
ಡಿಎಚ್‌ಒ ಇಂದಿರಾ ಆರ್.ಕಬಾಡೆ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಲ್.ರೂಪ ಮತ್ತಿತರರು ಇದ್ದರು.
ವೇಳಾಪಟ್ಟಿ: ಶಿಡ್ಲಘಟ್ಟ ತಾಲೂಕಿನ ಬೋದಗೂರು ಗ್ರಾಮದಲ್ಲಿ ಫೆ.20ರಂದು ಜಿಲ್ಲಾಧಿಕಾರಿ ಆರ್.ಲತಾ ಗ್ರಾಮ ವಾಸ್ತವ್ಯ ಹೂಡಲಿದ್ದಾರೆ. ಬೆಳಗ್ಗೆ 10ಕ್ಕೆ ಗ್ರಾಮದಲ್ಲಿನ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದು, ಬಳಿಕ ಎಸ್ಸಿ, ಎಸ್ಟಿ ಕಾಲನಿಯಲ್ಲಿ ಅಹವಾಲು ಸ್ವೀಕಾರ, ಮಧ್ಯಾಹ್ನ ಅಂಗನವಾಡಿ (ಸರ್ಕಾರಿ ಶಾಲೆಯಲ್ಲಿ) ಬಿಸಿಯೂಟ ಸೇವನೆ, ಬಳಿಕ ವಿವಿಧ ಇಲಾಖೆಗಳಿಂದ ಗ್ರಾಮಸ್ಥರಿಗೆ ಸವಲತ್ತುಗಳ ವಿತರಣೆ, ರಾತ್ರಿ ಗ್ರಾಮದಲ್ಲಿ ವಾಸ್ತವ್ಯ, ಮರುದಿನ ಬೆಳಗ್ಗೆ ಗ್ರಾಮದಿಂದ ಜಿಲ್ಲಾಡಳಿತ ಕಚೇರಿಗೆ ತೆರಳಲಿದ್ದಾರೆ.
ಸಚಿವ ಡಾ.ಕೆ.ಸುಧಾಕರ್ ಭಾಗಿ: ಶಿಡ್ಲಘಟ್ಟದ ಬೋದಗೂರು, ಚಿಕ್ಕಬಳ್ಳಾಪುರದ ತಿಪ್ಪೇನಹಳ್ಳಿ ಹಾಗೂ ಮಂಚೇನಹಳ್ಳಿಯ ಹಳೇಹಳ್ಳಿಯ ಗ್ರಾಮ ವಾಸ್ತವ್ಯದ ಸಂಜೆಯ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ ಸುಧಾಕರ್ ಭಾಗವಹಿಸಲಿದ್ದಾರೆ.