ಸಾಗರ: ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಆಸ್ತಿ ಎಷ್ಟಿದೆ? ಹರತಾಳು ಹಾಲಪ್ಪ ಎಷ್ಟು ಆಸ್ತಿ ಮಾಡಿದ್ದಾರೆ ಎಂಬುದು ತನಿಖೆಯಾಗಲಿ? ಈ ವಿಚಾರದಲ್ಲಿ ಒಂದೇ ವೇದಿಕೆಯಲ್ಲಿ ಚರ್ಚೆ ಮಾಡಲು ನಾವು ಸಿದ್ಧರಿದ್ದೇವೆ. ಹಾಲಪ್ಪ ಅವರು ಇದನ್ನು ಸವಾಲಾಗಿ ಸ್ವೀಕಾರ ಮಾಡಲಿ ಎಂದು ಕಾಗೋಡು ತಿಮಪ್ಪ ಅವರ ಪುತ್ರಿ, ಕೆಪಿಸಿಸಿ ಕಾರ್ಯದರ್ಶಿ ಡಾ. ರಾಜನಂದಿನಿ ಕಾಗೋಡು ಹೇಳಿದ್ದಾರೆ.
ಹೆಂಡದಂಗಡಿ ಮಾಡಿಕೊಂಡಿದ್ದಾನೆ ಎಂದು ನನ್ನ ಬಗ್ಗೆ ಟೀಕೆ ಮಾಡುವ ಕಾಗೋಡು ತಿಮ್ಮಪ್ಪ ಸಿಗರೇಟ್ ಮಾರಾಟ ಮಾಡುತ್ತಿದ್ದಾರೆ. ಮದ್ಯದ ಅಂಗಡಿಗೆ ಪರವಾನಗಿ ಕೇಳಿದ್ದರು ಎಂದು ಹಾಲಪ್ಪ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವುದಕ್ಕೆ ಸುದ್ದಿಗೋಷ್ಠಿಯಲ್ಲಿ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ನಮ್ಮ ತಂದೆ ರಾಜಕೀಯ ಜೀವನದಲ್ಲಿ ಎಂದಿಗೂ ವೈಯಕ್ತಿಕ ಹಿತಾಸಕ್ತಿ ಬಗ್ಗೆ ಗಮನ ಹರಿಸಿದವರಲ್ಲ. 1972ರಲ್ಲಿ ನಮ್ಮ ಅಜ್ಜ ಸಂಜೀವ್ ರಾವ್ ಅವರು ಯುನೈಟೆಡ್ ಟ್ರೇಡಿಂಗ್ ಕಂಪನಿ, ಶಾಂತಾ ಹೋಟೆಲನ್ನು ತಂದೆ ಹೆಸರಿಗೆ ಗಿಫ್ಟ್ ಡೀಡ್ ಮಾಡಿಕೊಟ್ಟಿದ್ದಾರೆ. ಶಾಸಕರಿಗೆ ತಾಕತ್ತು ಇದ್ದರೆ ಕೇಂದ್ರದ ಮೇಲೆ ಒತ್ತಡ ತಂದು ಸಿಗರೇಟ್ ನಿಷೇಧ ಮಾಡಿಸಲಿ. ನಮ್ಮ ತಂದೆಯಾಗಲಿ, ನಾವಾಗಲೀ ಬಾರ್ ಲೈಸೆನ್ಸ್‌ಗೆ ಶಾಸಕರ ಬಳಿ ಯಾವತ್ತೂ ಬೇಡಿಕೆ ಇರಿಸಿಲ್ಲ. ಕ್ಷೇತ್ರದ ಶಾಸಕರಾಗಿ ಸಾರ್ವಜನಿಕರೆದುರು ಸುಳ್ಳು ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದರು.
ಕಾಂಗ್ರೆಸ್ ಬಾಗಿಲು ತಟ್ಟಿದ್ದರು: ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಟಿಕೆಟ್ ಸಿಗುವುದಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ಸೇರಲು ಕಾಗೋಡು ತಿಮ್ಮಪ್ಪ ಅವರ ಮೊರೆ ಹೋಗಿದ್ದನ್ನು ಹಾಲಪ್ಪ ಮರೆತಿರಬಹುದು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಂತ್ ಗೇಲಿ ಮಾಡಿದ್ದಾರೆ.
ಅಂದಿನ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರೊಂದಿಗೆ ಹಾಲಪ್ಪ ಕಾಂಗ್ರೆಸ್ ಕಚೇರಿಗೂ ಹೋಗಿದ್ದರು. ಇದಕ್ಕೆ ನಾನೇ ಪ್ರತ್ಯಕ್ಷ ಸಾಕ್ಷಿ. ರಾಜಕೀಯ ಜೀವನದಲ್ಲಿ ಇವೆಲ್ಲ ಸಹಜ. ಹಾಲಪ್ಪ ಅವರು ಕಾಗೋಡು ತಿಮ್ಮಪ್ಪ ಅವರ ಬಗ್ಗೆ ಲಘುವಾಗಿ ಮಾತನಾಡಿರುವುದು ಅವರಿಗೆ ಶೋಭೆ ತರುವುದಿಲ್ಲ ಎಂದರು.
ಶಾಸಕ ಹಾಲಪ್ಪ ಅವರ ವರ್ತನೆಯನ್ನು ಕ್ಷೇತ್ರದ ಜನ ಗಮನಿಸುತ್ತಲೇ ಇದ್ದಾರೆ. ಸಾಗರ ಗ್ರಾಮಾಂತರ ಪ್ರದೇಶಗಳಲ್ಲಿ ಮದ್ಯದಂಗಡಿ ತೆರೆಯಲು ಆರಂಭಿಸಿದಾಗ ಜನತೆ ಪ್ರತಿಭಟನೆ ಮಾಡುತ್ತಲೇ ಬಂದಿದ್ದಾರೆ, ಜನ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಾರೆ. ಕಾಗೋಡು ತಿಮ್ಮಪ್ಪ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ಶಾಸಕ ಹಾಲಪ್ಪ ಹತಾಶರಾದಂತೆ ಕಾಣುತ್ತಿದ್ದು, ಸೋಲಿನ ಭೀತಿಯಲ್ಲಿ ಏನೇನೋ ಮಾತನಾಡುತ್ತಿದ್ದಾರೆ ಎಂದರು.