ಜಿಲ್ಲೆ

ಕಾಗೇರಿಯ ಮುಂದೆ ಸಾಲು ಸಾಲು ಸವಾಲು

ಕಾರವಾರ: ರಾಜ್ಯದಲ್ಲಿ ಅತ್ಯಧಿಕ ಮತಗಳ ಅಂತರದಿಂದ ಆಯ್ಕೆಯಾದ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಂದ ಮತದಾರರು ಅತ್ಯಧಿಕ ಅಭಿವೃದ್ಧಿಯ ನಿರೀಕ್ಷೆಯಲ್ಲಿದ್ದಾರೆ.
ಮಾಜಿ ಸ್ಪೀಕರ್ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಡಾ.ಅಂಜಲಿ ನಿಂಬಾಳಕರ್ ವಿರುದ್ಧ 3.37 ಮತದಿಂದ ಜಯಗಳಿಸಿ, ಸಂಸತ್‌ನಲ್ಲಿ ಉತ್ತರಕನ್ನಡ ಕ್ಷೇತ್ರ ಪ್ರತಿನಿಧಿಸಲು ಸಜ್ಜಾಗಿದ್ದಾರೆ. ದೇಶದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ರಚನೆಯಾಗುತ್ತಿದೆ. ಜಿಲ್ಲೆಯ ಸಂಸದರೂ ಆಡಳಿತ ಪಕ್ಷವನ್ನೇ ಪ್ರತಿನಿಧಿಸುತ್ತಿರುವುದರಿಂದ ಸಹಜವಾಗಿ ಜನರ ನಿರೀಕ್ಷೆ ಹೆಚ್ಚಿದೆ.
ತಮ್ಮ ಗೆಲುವಿನ ಸಂಭ್ರಮದ ಕ್ಷಣಗಳನ್ನು ಜಾಲತಾಣಗಳಾದ ಫೇಸ್‌ಬುಕ್, ಇನ್ಸ್ಸ್ಟಾಗ್ರಾಂನಲ್ಲಿ ಹಂಚಿಕೊAಡ ಕಾಗೇರಿ ಅವರಿಗೆ ಸಾಕಷ್ಟು ಜನ ಅಭಿನಂದನೆ ಸಲ್ಲಿಸಿದ್ದಾರೆ. ಜತೆಗೆ ಹಿಂದೆಲ್ಲ ಆಗಿದ್ದಾಯಿತು. ಈಗ ಅಭಿವೃದ್ಧಿಯತ್ತ ಹೆಚ್ಚು ಗಮನ ಕೊಡಿ' ಎಂಬ ಸಲಹೆ ನೀಡಿದ್ದಾರೆ. ಕಾಗೇರಿ ಅವರು ಜಿಲ್ಲೆಯ ಅಭಿವೃದ್ಧಿ ಕಾರ್ಯದಲ್ಲಿ ಕ್ಷಿಪ್ರವಾಗಿ ಕಾರ್ಯಪ್ರವೃತ್ತವಾಗಲಿ ಎಂಬ ಒತ್ತಾಯ ಜನರಿಂದ ಕೇಳಿ ಬಂದಿದೆ. ಅಭಿವೃದ್ಧಿ ಕುಂಠಿತ: ಕಳೆದ 20 ವರ್ಷಗಳಿಂದ ನಿರಂತರವಾಗಿ (2004 ರಿಂದ 2024) ಉತ್ತರ ಕನ್ನಡದ ಲೋಕಸಭಾ ಸದಸ್ಯರಾಗಿದ್ದ ಬಿಜೆಪಿಯ ಅನಂತ ಕುಮಾರ ಹೆಗಡೆ ಅಭಿವೃದ್ಧಿಯ ವಿಚಾರ ಮಾತನಾಡುತ್ತಲೇ ಇರಲಿಲ್ಲ. ಹಿಂದುತ್ವದ ವಿಷಯದಲ್ಲಿ ಅವರ ಅಭಿಮಾನಿಯಾಗಿದ್ದವರೂ ಅನಂತ ಮಾಡಿದ ಅಭಿವೃದ್ಧಿಯ ವಿಚಾರ ಪ್ರಸ್ತಾಪಿಸಿದಾಗ ಮೌನಕ್ಕೆ ಜಾರುತಿದ್ದರು. ಮುಖ ಸಣ್ಣದು ಮಾಡುತ್ತಿದ್ದರು. ಪಕ್ಕದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರ ಕನ್ನಡ ಅಭಿವೃದ್ಧಿಯ ವಿಷಯದಲ್ಲಿ ಕನಿಷ್ಠ 10 ವರ್ಷ ಹಿಂದಿದೆ ಎಂಬುದು ಜಿಲ್ಲೆಯ ಜನರ ಕೊರಗು. ಆದರೆ, ಅನಂತ ಕುಮಾರ ಹೆಗಡೆಜನರು ಅಂದುಕೊಂಡ ಅಭಿವೃದ್ಧಿಯೇ ಬೇರೆ, ನನ್ನ ಅಭಿವೃದ್ಧಿಯ ಭಾಷ್ಯವೇ ಬೇರೆ' ಎನ್ನುತ್ತಿದ್ದರು. ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಸ್ಪಂದಿಸದೇ, ಕೇಂದ್ರ ಮಟ್ಟದಲ್ಲಿ ಆಗಬಹುದಾದ ಕಾರ್ಯಗಳಿಗೆ ಜಿಲ್ಲೆಯಿಂದ ಸಮರ್ಥ ಧ್ವನಿಯೇ ಇಲ್ಲದೇ ಎರಡು ದಶಕಗಳೇ ಕಳೆದಿದ್ದವು. ಈಗ ಸಂಸದರು ಬದಲಾಗಿದ್ದರಿಂದ ಜನರಲ್ಲಿ ಮತ್ತೆ ನಿರೀಕ್ಷೆ ಮೂಡಿದೆ. ತಮ್ಮ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಶೀಘ್ರ ಜಾರಿಗೆ ತರುವ ಕಾರ್ಯವಾಗಲಿ ಎಂಬುದು ಜನಾಶಯವಾಗಿದೆ.

ತುರ್ತಾಗಿ ಸ್ಪಂದಿಸಬೇಕಾದ ವಿಚಾರಗಳು

*ಅರಣ್ಯ ಅತಿಕ್ರಮಣ ಸಕ್ರಮ ಸಮಸ್ಯೆಗೆ ತಾರ್ಕಿಕ ಅಂತ್ಯ ಕಂಡುಕೊಳ್ಳುವುದು. ಅತಿಕ್ರಮಣದಾರರ ಗೋಳಿಗೆ ಸ್ಪಂದಿಸಬೇಕು.
*ಸೀಬರ್ಡ್ ನೌಕಾ ಯೋಜನೆ , ಕೈಗಾ ಅಣು ಸ್ಥಾವರ ಮುಂತಾದ ಕೇಂದ್ರ ಸರ್ಕಾರಿ ಸ್ವಾಮ್ಯದ ಇಲಾಖೆ, ಉದ್ದಿಮೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ.
*ಕಾರವಾರ-ಭಟ್ಕಳ ಚತುಷ್ಪಥ ಕಾಮಗಾರಿಯ ಅವಾಂತರಗಳನ್ನು ಸರಿಪಡಿಸಬೇಕು. ಕಾಮಗಾರಿ ಮುಗಿಸುವಂತೆ ಮಾಡಬೇಕು.

  • ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಶೀಘ್ರ ಮುಗಿಸಬೇಕು. ಶಿರಸಿ-ಹಾವೇರಿ ಹೆದ್ದಾರಿ ಕಾಮಗಾರಿ ಪ್ರಾರಂಭಕ್ಕೆ ಕ್ರಮ ವಹಿಸಬೇಕು.
    *ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗಕ್ಕೆ ಉಂಟಾಗಿರುವ ತಾಂತ್ರಿಕ ತೊಂದರೆಗಳನ್ನು ಬಗೆಹರಿಸಬೇಕು.
    *ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ರೈಲ್ವೆ ಯೋಜನೆ ಅಂತಿಮ ಸರ್ವೇ ಕಾರ್ಯಕ್ಕೆ ಕೈಗೊಳ್ಳಬೇಕು.
    *ಹಾಲಕ್ಕಿಗಳು, ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಪ್ರಸ್ತಾವನೆ ಕೇಂದ್ರ ಸರ್ಕಾರದ ಬಳಿ ಇದ್ದು, ಕಡತಗಳನ್ನು ಫಾಲೋ ಅಪ್ ಮಾಡಿ ಆ ಸಮಾಜಗಳಿಗೆ ನ್ಯಾಯ ಒದಗಿಸಬೇಕು.
    *ಕೇಂದ್ರ ಸರ್ಕಾರದಿಂದ ಆಗುವ ಇಎಸ್‌ಐ ಆಸ್ಪತ್ರೆಯನ್ನು ಜಿಲ್ಲೆಯ ಮಧ್ಯ ಭಾಗದಲ್ಲಿ ತೆರೆಯಬೇಕು. ಇರುವ ಇಎಸ್‌ಐ ಆಸ್ಪತ್ರೆಗೆ ಬಲ ತಂದುಕೊಡಬೇಕು.
    *ಸಿಆರ್‌ಜಡ್ ವಿಚಾರವಾಗಿ ಇರುವ ಗೊಂದಲಗಳನ್ನು ಬಗೆಹರಿಸುವ ಕಾರ್ಯವಾಗಬೇಕು. ಸಿಆರ್‌ಜಡ್‌ನಿಂದ ಉಂಟಾಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು.
    *ಉತ್ತರ ಕನ್ನಡದ ಪ್ರವಾಸೋದ್ಯಮಕ್ಕೆ ರಾಷ್ಟç ಮಟ್ಟದ ಮನ್ನಣೆ ಸಿಗುವ ಕಾರ್ಯವಾಗಬೇಕು. ಮೂಲ ಸೌಕರ್ಯ ಅಭಿವೃದ್ಧಿಗೆ ವಿಶೇಷ ಕೊಡುಗೆ ದೊರೆಯಬೇಕು.
    *ಜಿಲ್ಲೆಯಲ್ಲಿ ತೋಟಗಾರಿ, ಕೃಷಿ ಬೆಳೆಗಳ ಮೌಲ್ಯವರ್ಧನೆ ಮಾಡಿ, ಸ್ಥಿರ ಬೆಲೆ ಸಿಗುವಂತೆ ಮಾಡಲು ಕೇಂದ್ರದ ಅನುದಾನ ಸಮರ್ಪಕವಾಗಿ ದೊರೆಯಬೇಕು.

  • ಅಂಕೋಲಾ, ಶಿರಸಿ ಕ್ಷೇತ್ರಗಳ ಶಾಸಕನಾಗಿ, ಜಿಲ್ಲಾ ಉಸ್ತುವಾರಿ ಸಚಿವನಾಗಿ, ರಾಜ್ಯದ ಸ್ಪೀಕರ್ ಆಗಿ ಕೆಲಸ ಮಾಡಿದ್ದೇನೆ. ಸಾರ್ವಜನಿಕ ಜೀವನದಲ್ಲಿ 40 ವರ್ಷಗಳ ಅನುಭವ ಇದೆ. ಜಿಲ್ಲೆಯ ಸಮಸ್ಯೆಗಳ ಬಗ್ಗೆ ಸ್ಪಷ್ಟ ಅರಿವಿದೆ. ಜಿಲ್ಲೆಯ ಅಭಿವೃದ್ಧಿಯ ವಿಚಾರದಲ್ಲಿ ಹಿಂದಿಗಿAತಲೂ ವೇಗವಾಗಿ ಕಾರ್ಯಪ್ರವೃತ್ತನಾಗಲಿದ್ದೇನೆ.
    ವಿಶ್ವೇಶ್ವರ ಹೆಗಡೆ ಕಾಗೇರಿ
    ನೂತನ ಸಂಸದ