ಜಿಲ್ಲೆ

ಕಾಂಪೌಂಡ್‌ನಿಂದ ಜಾರಿಬಿದ್ದು ವಿದ್ಯಾರ್ಥಿ ಸಾವು

ಗುಂಡ್ಲುಪೇಟೆ: ತಾಲೂಕಿನ ಯಡವನಹಳ್ಳಿ ಗ್ರಾಮದ ಮುರಾರ್ಜಿ ವಸತಿ ಶಾಲೆಯ ಹಾಸ್ಟೆಲ್ ಕಾಂಪೌಂಡ್ ಮೇಲೆಹತ್ತಿದ್ದಾಗ ಕಾಲು ಜಾರಿ ಕೆಳಗೆ ಬಿದ್ದು ಗಾಯಗೊಂಡು ಆಸ್ಪತ್ರೆ ಸೇರಿದ್ದ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾನೆ.

ಕೊಳ್ಳೇಗಾಲ ತಾಲೂಕಿನ ಮುಡಿಗುಂಡ ಗ್ರಾಮದ ಸೋಮಣ್ಣ ಎಂಬುವರ ಪುತ್ರ ಮನೀತ್(17) ಮೃತ ದುರ್ದೈವಿ. ಮುರಾರ್ಜಿ ವಸತಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮುಗಿಸಿ ಇದೇ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಡಿ 30ರಂದು ತಡ ರಾತ್ರಿ ಕಾಂಪೌಂಡ್ ಹತ್ತುವಾಗ ಮೇಲಿನಿಂದ ಕೆಳಗೆ ಜಾರಿ ಬಿದ್ದಾಗ ಯುಜಿಡಿ ಪಿಟ್ ತಲೆಗೆ ಹೊಡೆದು ಅಸ್ವಸ್ಥನಾಗಿ ಇಡೀ ರಾತ್ರಿ ಅಲ್ಲೇ ಬಿದ್ದಿದ್ದ. ಮರುದಿನ ಬೆಳಗ್ಗೆ ನೋಡಿದ ಕಾಲೇಜಿನ ಸಿಬ್ಬಂದಿ ಹಾಗೂ ಉಪನ್ಯಾಸಕರು ಮೈಸೂರಿನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮೂರು ದಿನಗಳ ಕಾಲ ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಿಸದೆ ಗುರುವಾರ ಕೆ.ಆರ್. ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ.

ಈ ಬಗ್ಗೆ ಬೇಗೂರು ಠಾಣೆಗೆ ದೂರು ನೀಡಲಾಗಿದೆ. ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ಪಾಲಕರಿಗೆ ಒಪ್ಪಿಸಲಾಗುವುದು ಎಂದು ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್ ಕುಮಾರ್ ವಿಜಯವಾಣಿಗೆ ತಿಳಿಸಿದ್ದಾರೆ.