ಜಿಲ್ಲೆ

ಕಾಂತರಾಜ್, ಸದಾಶಿವ ವರದಿ ಜಾರಿಗೆ ಆಗ್ರಹ

ಚಿತ್ರದುರ್ಗ: ಕಾಂತರಾಜ್, ನಿ.ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಅಹಿಂದ ಜಾತಿಗಳ ಜಾಗೃತಿ ವೇದಿಕೆ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

ವೀರವನಿತೆ ಒನಕೆ ಓಬವ್ವ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಸಾಮಾಜಿಕ ನ್ಯಾಯಕ್ಕಾಗಿ ಇವರೆಡು ವರದಿ ಜಾರಿಗೆ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮೂಲಕ ಮನವಿ ರವಾನಿಸಿದರು.

ಹಿಂದುಳಿದ ಜಾತಿ ವರ್ಗಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ ಮಾತನಾಡಿ, ದಲಿತರು, ಶೋಷಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಮೊದಲಿನಿಂದಲೂ ವ್ಯವಸ್ಥಿತವಾಗಿ ವಂಚನೆಗೆ ಒಳಗಾಗುತ್ತಿದ್ದಾರೆ. ಈ ಸಮುದಾಯಗಳನ್ನು ಒಗ್ಗೂಡಿಸಿ, ಕೋಟೆನಾಡಲ್ಲಿ ಬೃಹತ್ ಸಮಾವೇಶದೊಂದಿಗೆ ಲಕ್ಷಾಂತರ ಜನರನ್ನು ಸೇರಿಸಿ ಶಕ್ತಿ ಪ್ರದರ್ಶಿಸಿದಾಗ ಮಾತ್ರ ಸರ್ಕಾರ ಅಹಿಂದ ಜಾತಿಗಳ ಬೇಡಿಕೆಗಳಿಗೆ ಸ್ಪಂದಿಸಲಿದೆ ಎಂದು ಹೇಳಿದರು.

ಅಹಿಂದ ನಾಯಕ, ಸಿಎಂ ಸಿದ್ದರಾಮಯ್ಯ ಈ ಹಿಂದೆ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ರಚಿಸಿ, 162 ಕೋಟಿ ರೂ. ಖರ್ಚು ಮಾಡಿ, 1.6 ಲಕ್ಷ ಶಿಕ್ಷಕರ ಮೂಲಕ ಸಮೀಕ್ಷೆ ನಡೆಸಿದ್ದು, ಆಯೋಗದ ವರದಿ ಜಾರಿಗೊಳಿಸುವುದು ಸರ್ಕಾರದ ಕರ್ತವ್ಯ. ಇದಕ್ಕೆ ಒಪ್ಪಿಗೆ ಸೂಚಿಸಿರುವ ಮುಖ್ಯಮಂತ್ರಿ ಕೈ ಬಲಪಡಿಸುವುದು ಹಿಂದುಳಿದ ಜಾತಿಗಳ ಜವಾಬ್ದಾರಿಯಾಗಿದೆ ಎಂದರು.

ಸಾಮಾಜಿಕ ಸಂಘರ್ಷ ಸಮಿತಿ ಅಧ್ಯಕ್ಷ ಸಿ.ಕೆ.ಮಹೇಶ್ ಮಾತನಾಡಿ, ಮೇಲ್ವರ್ಗದವರು ಸಿದ್ಧಾಂತಕ್ಕೆ ಬದ್ಧವಾಗದೆ, ಜಾತಿಗಳ ಹಿತರಕ್ಷಣೆಗೆ ಮುಂದಾಗಿದ್ದಾರೆ. ದಲಿತರ, ಹಿಂದುಳಿದವರ, ಶೋಷಿತರ, ಅಲ್ಪಸಂಖ್ಯಾತರ ಸೌಲಭ್ಯ ಕಸಿದುಕೊಳ್ಳುತ್ತಿದ್ದಾರೆ. ಆದ್ದರಿಂದ ಅಹಿಂದ ವರ್ಗ ಬದ್ಧತೆ ಪ್ರದರ್ಶಿಸಿದಾಗ ಮಾತ್ರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಬಲಗೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಉದ್ದಿಮೆ, ಸಾರಿಗೆ, ಮಾಹಿತಿ ತಂತ್ರಜ್ಞಾನ, ಶಿಕ್ಷಣ, ವೈದ್ಯಕೀಯ, ಸಿನಿಮಾ, ರಿಯಲ್ ಎಸ್ಟೇಟ್, ಗುತ್ತಿಗೆಗಾರಿಕೆ, ಗಣಿಗಾರಿಕೆ, ಏಜೆನ್ಸಿ, ದಲ್ಲಾಳಿ, ಸಂಸ್ಕೃತಿ, ಧರ್ಮ, ಸಾಹಿತ್ಯ ಸೇರಿ ಎಲ್ಲಾ ಕ್ಷೇತ್ರಗಳೂ ಜನಸಂಖ್ಯೆಯಲ್ಲಿ ಶೇ 20ರಷ್ಟಿರುವ ಬಲಾಢ್ಯರ ಕೈಯಲ್ಲಿವೆ. ಹೀಗಾಗಿ ಸಂಪತ್ತು, ಅಧಿಕಾರವನ್ನು ಈ ಸಮುದಾಯದವರೇ ಪಡೆಯುತ್ತಿದ್ದಾರೆ. ಆದ್ದರಿಂದ ನಾವೂ ಒಗ್ಗೂಡಬೇಕಿದೆ ಎಂದು ಸಲಹೆ ನೀಡಿದರು.

ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ ಮಾತನಾಡಿ, ಅಹಿಂದ ಜಾತಿಗಳು ಜನಸಂಖ್ಯೆಯಲ್ಲಿ ಶೇ 80ರಷ್ಟಿವೆ. ಆದರೂ ನಮ್ಮವರಿಗೆ ಸಿಕ್ಕಿರುವ ಸೌಲಭ್ಯ ಅತ್ಯಂತ ವಿರಳ. ಇದು ಸಂವಿಧಾನ ಆಶಯಗಳಿಗೆ ವಿರುದ್ಧವಾಗಿದೆ. ಹೀಗಾಗಿ ಎರಡೂ ವರದಿ ಜಾರಿಗೆ ಸರ್ಕಾರ ಮುಂದಾಗಬೇಕು ಎಂದು ಮನವಿ ಮಾಡಿದರು.

ವಿವಿಧ ಸಮುದಾಯಗಳ ಮುಖಂಡರಾದ ಜಿ.ಪಿ.ಗೋಪಾಲ್, ಮೆಹಬೂಬ್ಪಾಷ, ಜಯರಾಂ, ಸುಜ್ಞಾನದೇವ್, ಪ್ರಸನ್ನಕುಮಾರ್, ಜಿ.ಎಸ್.ಮಂಜುನಾಥ್, ಡಾ.ಬಿ.ತಿಪ್ಪೇಸ್ವಾಮಿ ಜೆ.ಜೆ.ಹಟ್ಟಿ, ಬಿ.ಕಾಂತರಾಜ್, ಎಚ್.ಸಿ.ನಿರಂಜನಮೂರ್ತಿ, ಎಚ್.ಮಂಜಪ್ಪ, ಡಿ.ದುರುಗೇಶ್, ಮಲ್ಲಿಕಾರ್ಜುನ್, ಬಿ.ಟಿ.ಜಗದೀಶ್, ಭಾಸ್ಕರ್, ಬಿ.ರಾಮಜ್ಜ, ಶ್ರೀರಾಮ್, ಎಂ.ಕೆ.ತಾಜ್‌ಪೀರ್, ಟಿ.ಸ್ವಾಮಿ, ಕೆ.ಎಂ.ಹಾಲಸ್ವಾಮಿ, ಎನ್.ಡಿ.ಕುಮಾರ್, ಎಸ್.ಎನ್.ರವಿಕುಮಾರ್, ಮಾರಣ್ಣ, ಆರ್.ಮೂರ್ತಿ, ಆರ್.ಕೆ.ಸರ್ದಾರ್, ನಸರುಲ್ಲಾ, ದೀಪು, ಫಕೃದ್ದಿನ್, ತಿಪ್ಪೇಸ್ವಾಮಿ, ಎಚ್.ಆನಂದ್‌ಕುಮಾರ್, ಎಸ್‌ಎಂಎಸ್‌ಟಿ ಫಯಾಜ್, ಎಂ.ಪಿ.ಶಂಕರ್, ತಕ್ಕಡಿ ಸುರೇಶ್, ಮೃತ್ಯುಂಜಯ, ಎಸ್.ಲಕ್ಷ್ಮಿಕಾಂತ್, ರಘು ಇತರರಿದ್ದರು.