ಜಿಲ್ಲೆ

ಕಾಂತರಾಜ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ಎಸ್‌ಡಿಪಿಐ ಪ್ರತಿಭಟನೆ

Hassan - Mohan Kanthur

ಹಾಸನ: ಕಾಂತರಾಜ ಆಯೋಗ 2015ರಲ್ಲಿ ನೀಡಿದ ವರದಿಯನ್ನು ಅಂಗೀಕರಿಸುವ ಮೂಲಕ ಮುಸ್ಲಿಂರ 2ಬಿ ಮೀಸಲಾತಿಯನ್ನು ಶೇಕಡ 8ಕ್ಕೆ ಏರಿಸಲು ಒತ್ತಾಯಿಸಿ ಎಸ್‌ಡಿಪಿಐ ವತಿಯಿಂದ ನಗರದ ಹೇಮಾವತಿ ಪ್ರತಿಮೆ ಬಳಿ ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಆಫ್ಸರ್ ಕೊಡ್ಲಿಪೇಟೆ ಮಾತನಾಡಿ, ಕಾಂಗ್ರೆಸ್ ಮುಖಂಡರು ಚುನಾವಣೆ ಸಂದರ್ಭದಲ್ಲಿ ಅಧಿಕಾರಕ್ಕೆ ಬಂದರೆ ಕಾಂತರಾಜು ವರದಿಯನ್ನು ಜಾರಿಗೊಳಿಸುತ್ತೇವೆ. ಅದೇ ರೀತಿ ಮುಸ್ಲಿಮರಿಗೆ 2(ಬಿ) ಮೀಸಲಾತಿಯನ್ನು ಮರುಸ್ಥಾಪಿಸುತ್ತೇವೆಯೆಂಬ ಭರವಸೆ ನೀಡಿದ್ದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ನೂರು ದಿನಗಳು ಕಳೆದರೂ ಜಾರಿಗೆ ತರದೇ ಇರುವುದು ಖಂಡನೀಯ ಎಂದರು.

ಮುಸಲ್ಮಾನರ 2ಬಿ ಮೀಸಲಾತಿ ಶೇಕಡಾ 8ಕ್ಕೆ ಏರಿಸಬೇಕು. ಈ ಮೂಲಕ ಚುನಾವಣೆಗೂ ಮುನ್ನ ಅಲ್ಪಸಂಖ್ಯಾತರಿಗೆ ನೀಡಿದ್ದ ಭರವಸೆ ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಸಾಮಾಜಿಕ ನ್ಯಾಯ ಮತ್ತು ಎಲ್ಲಾ ವರ್ಗಗಳ ಕ್ಷೇಮಾಭಿವೃದ್ಧಿ ಸದುದ್ದೇಶ ಹೊಂದಿರುವ ಕಾಂತರಾಜು ಆಯೋಗದ ವರದಿಯನ್ನು ಜಾರಿಗೆ ತರುವ ಭರವಸೆ ನೀಡಿರುವ ಕಾಂಗ್ರೆಸ್ ತನ್ನ ಭರವಸೆಯಿಂದ ನುಣುಚಿಕೊಳ್ಳುವ ಹುನ್ನಾರ ಮಾಡುತ್ತಿದೆ ಎಂದು ದೂರಿದರು. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ತನ್ನ ಭರವಸೆ ಈಡೇರಿಸದೆ ಇದ್ದರೆ ಮುಂದಿನ ದಿನಗಳಲ್ಲಿ ಎಸ್‌ಡಿಪಿಐ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು

ಪ್ರತಿಭಟನೆಯಲ್ಲಿ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಸಿದ್ದಿಕ್ ಆನೆಮಹಲ್, ಮುಖಂಡರಾದ ಅಮಾನುಲ್ಲಾ, ಸೈಯದ್ ಇರ್ಫಾನ್, ಫೈರೋಜ್ ಪಾಷಾ, ಸುಹಿಲ್ ಸತ್ವರ್, ದೌಲತ್, ಥಾಹೆರ್, ಸಲೀಂ ಮುಬಾರಕ್ ಇತರರು ಭಾಗವಹಿಸಿದ್ದರು.