ಜಿಲ್ಲೆ

ಕಾಂಡಂಚಿನ ಗ್ರಾಮಗಳಲ್ಲಿ ಆನೆ ದಾಂಧಲೆ

  • ಗುಂಡ್ಲುಪೇಟೆ: ಬಂಡೀಪುರ ಹುಲಿ ಯೋಜನೆಯ ಕುಂದಕೆರೆ ವಲಯದ ಕಾಡಂಚಿನ ಗ್ರಾಮದ ಜಮೀನುಗಳಲ್ಲಿ ಕಳೆದ ನಾಲ್ಕೈದು ತಿಂಗಳಿಂದ ಆನೆ ದಾಂಧಲೆ ಮಾಡುತ್ತಿದ್ದು, ಸೆರೆಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇದರಿಂದ ಈ ಭಾಗದ ಜನರಲ್ಲಿ ಆತಂಕ ಮನೆ ಮಾಡಿದೆ.
    ಮಂಗಳವಾರ ರಾತ್ರಿ ಬವಸಣ್ಣ ಎಂಬುವವರಿಗೆ ಸೇರಿದ ಮನೆ ಸೇರಿದಂತೆ ತೆಂಗಿನ ಮರಗಳನ್ನು ಕೆಡವಿ ದಾಂಧಲೆ ನಡೆಸಿದೆ. ಪರಿಣಾಮ ಲಕ್ಷಾಂತರ ರೂ.ನಷ್ಟ ಉಂಟಾಗಿದೆ. ಎಲಚೆಟ್ಟಿ ಗ್ರಾಮದ ಬಸಪ್ಪ ಎಂಬುವವರಿಗೆ ಸೇರಿದ ಈರುಳ್ಳಿ ಬೆಳೆಯನ್ನು ನಾಶ ಮಾಡಿದೆ.
    ಜನರು ಜಮೀನಿಗೆ ಹೋಗಿ ಕೃಷಿ ಚಟುವಟಿಕೆ ಮಾಡಲು ಹಿಂಜರಿಯುತ್ತಿದ್ದಾರೆ. ರಾತ್ರಿ ಸಮಯದಲ್ಲಿ ಬೆಳೆಗಳನ್ನು ಕಾಯಲು ಜಮೀನುಗಳಿಗೆ ಹೋಗಲೂ ಆಗುತ್ತಿಲ್ಲ. ಇದರಿಂದ ಕಷ್ಟಪಟ್ಟು ಬೆಳೆದ ಬೆಳೆಗಳೆಲ್ಲ ವನ್ಯಜೀವಿಗಳ ಪಾಲಾಗುತ್ತಿದೆ. ಕತ್ತಲಾಗುವ ಮೊದಲೇ ಜನರು ಮನೆ ಸೇರಬೇಕಾದ ಪರಿಸ್ಥಿತಿ ಎದುರಾಗಿದೆ.
    ಈ ಬಗ್ಗೆ ಅರಣ್ಯ ಇಲಾಖೆಯ ಗಮನಕ್ಕೆ ತಂದರೆ ಆನೆಯನ್ನು ಸೆರೆ ಹಿಡಿಯುವ ಪ್ರಯತ್ನ ಮಾಡುತ್ತಿಲ್ಲ. ಆನೆಯನ್ನು ಕಾಡಿನೊಳಗೆ ಓಡಿಸಲೂ ಯತ್ನಿಸುತ್ತಿಲ್ಲ. ನೆಪ ಮಾತ್ರಕ್ಕೆ ಜೀಪಿನಲ್ಲಿ ಸೈರನ್ ಹಾಕುತ್ತ ಒಂದೆರಡು ಸುತ್ತು ಹಾಕಿ ಹೋಗುತ್ತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಆನೆಯನ್ನು ಸೆರೆ ಹಿಡಿದು ಬೇರೆ ಕಡೆಗೆ ಬಿಡಬೇಕು. ಇಲ್ಲದಿದ್ದರೆ ಅರಣ್ಯ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಜನರು ಎಚ್ಚರಿಕೆ ನೀಡಿದ್ದಾರೆ.