ಜಿಲ್ಲೆ

ಕಾಂಡ ಸೋರುವ ತೆಂಗಿನ ಮರಗಳಿಗೆ ಬೇರುಣಿಸುವಿಕೆ ಪದ್ಧತಿ ಪ್ರಾತ್ಯಕ್ಷಿಕೆ

ಹಾಸನ: ತಾಲೂಕಿನ ದುದ್ದ ಹೋಬಳಿಯ ಕಬ್ಬಳಿ ಗ್ರಾಮದಲ್ಲಿ ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ರೋಗಗ್ರಸ್ತ ತೆಂಗಿನ ಮರಗಳಿಗೆ ಬೇರುಣಿಸುವಿಕೆ ಪದ್ಧತಿ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಂಡಿದ್ದರು.
ಗ್ರಾಮದಲ್ಲಿ ಹೆಚ್ಚಾಗಿ ತೆಂಗು ಬೆಳೆಗಾರರಿದ್ದು, ಕಾಂಡ ಸೋರುವಿಕೆ ರೋಗವು ಹೆಚ್ಚಾಗಿ ಕಂಡು ಬರುತ್ತಿರುವುದರಿಂದ ಇದರ ನಿಯಂತ್ರಣಕ್ಕೆ ಮೊದಲಿಗೆ ತೆಂಗಿನ ಮರದಿಂದ ಎರಡು ಅಡಿ ಅಂತರದ ಒಳಗಿರುವ ಮಣ್ಣನ್ನು ಬಗೆದು ಒಂದು ಕ್ರಿಯಾತ್ಮಕ ಬೇರನ್ನು ಆಯ್ಕೆ ಮಾಡಿಕೊಳ್ಳಬೇಕು. ಅದೇ ಬೇರನ್ನು ಓರೆಯಾಗಿ ಕತ್ತರಿಸಿ ಅದಕ್ಕೆ ಐದು ಮಿ.ಲೀ. ಹೆಕ್ಸಾಕೊನಜೋಲ್ ಮತ್ತು ನೂರು ಮಿ.ಲೀ. ನೀರಿನ ಮಿಶ್ರಣವನ್ನು ಒಂದು ಪ್ಲಾಸ್ಟಿಕ್ ಕವರ್ ನಲ್ಲಿ ಬೇರಿಗೆ ತಾಗುವಂತೆ ಕಟ್ಟಬೇಕು.
ಈ ರೀತಿ ವರ್ಷದಲ್ಲಿ ಕನಿಷ್ಠ ಮೂರು ಬಾರಿ ಮಾಡುವುದರಿಂದ ಮುಂದಿನ ಎರಡು ವರ್ಷಗಳಲ್ಲಿ ರೋಗವಿರುವ ಮರದಲ್ಲಿ ರೋಗಾಣುಗಳು ಸತ್ತು ಇಳುವರಿ ಹೆಚ್ಚಾಗುವುದು ಅಥವಾ ಇದರ ಪರ್ಯಾಯವಾಗಿ ಬೋರ್ಡೋ ಪೇಸ್ಟನ್ನು ಸೋರುತ್ತಿರುವ ಜಾಗಕ್ಕೆ ಮೆತ್ತುವುದರಿಂದ ಕಾಂಡ ಸೋರುವಿಕೆಯು ಕಡಿಮೆಯಾಗುವುದೆಂದು ವಿದ್ಯಾರ್ಥಿಗಳು ಪ್ರಾತ್ಯಕ್ಷಿಕೆ ಮೂಲಕ ತೋರಿಸಿದರು.
ಈ ಸಂದರ್ಭದಲ್ಲಿ ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಸಸ್ಯ ರೋಗಶಾಸ್ತ್ರ ವಿಭಾಗದ ಡಾ.ಸಿ.ಚನ್ನಕೇಶವ ಅವರು ಮಾತನಾಡಿ ಕಾಂಡ ಸೋರುವಿಕೆ ರೋಗದ ಲಕ್ಷಣ,ಹರಡುವಿಕೆ,ರೋಗ ನಿಯಂತ್ರಣಗಳ ಬಗ್ಗೆ ಮಾಹಿತಿ ನೀಡಿ ರೈತರ ಪ್ರಶ್ನೆಗಳಿಗೆ ಉತ್ತರಿಸಿದರು.