ಹನೂರು ಸಮೀಪದ ಕಾಂಚಳ್ಳಿ ಗ್ರಾಮದಲ್ಲಿ ಪಚ್ಚೇಗೌಡ ಎಂಬವರಿಗೆ ಸೇರಿದ ಹಸು ಸಿಡಿಲಿನಿಂದ ಮೃತಪಟ್ಟಿರುವುದು. 
ಜಿಲ್ಲೆ

ಕಾಂಚಳ್ಳಿಯಲ್ಲಿ ಸಿಡಿಲಿಗೆ ಹಸು ಬಲಿ

ಹನೂರು: ತಾಲೂಕಿನ ಕಾಂಚಳ್ಳಿ ಗ್ರಾಮದಲ್ಲಿ ಭಾನುವಾರ ರಾತ್ರಿ ಸಿಡಿಲು ಬಡಿದು ಹಸುವೊಂದು ಮೃತಪಟ್ಟಿದೆ. ಲೊಕ್ಕನಹಳ್ಳಿ ಹೋಬಳಿ ಹೊಸಪೋಡು ಗ್ರಾಮದಲ್ಲಿ ಮನೆಗೆ ಹಾನಿಯಾಗಿದ್ದು, ಬಾಲಕನೊಬ್ಬ ಗಾಯಗೊಂಡಿದ್ದಾನೆ.

ಕಾಂಚಳ್ಳಿಯ ಪಚ್ಚೇಗೌಡ ಎಂಬವರು ತಮ್ಮ ಜಮೀನಿನ ಮನೆ ಮುಂಭಾಗ ಹಸುವನ್ನು ಕಟ್ಟಿಹಾಕಿದ್ದರು. ರಾತ್ರಿ 8ಗಂಟೆ ವೇಳೆಯಲ್ಲಿ ಸಿಡಿಲು ಸಹಿತ ಜೋರು ಮಳೆಯಾಯಿತು. ಈ ವೇಳೆ ಸಿಡಿಲಿಗೆ ಹಸು ಮೃತಪಟ್ಟಿದೆ. ಸೋಮವಾರ ಗ್ರಾಮಲೆಕ್ಕಿಗ ರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸರ್ಕಾರದಿಂದ ಪರಿಹಾರ ದೊರಕಿಸಿಕೊಡಲು ಅಗತ್ಯ ಕ್ರಮವಹಿಸಲಾಗುವುದು ಎಂದು ತಹಸೀಲ್ದಾರ್ ಆನಂದಯ್ಯ ಪ್ರತಿಕ್ರಿಯಿಸಿದ್ದಾರೆ.

ಹೊಸಪೋಡು ಗ್ರಾಮದ ಮಾದೇವ ಎಂಬವರ ಮನೆಗೆ ಭಾನುವಾರ ರಾತ್ರಿ ಸಿಡಿಲು ಬಡಿದ ಪರಿಣಾಮ ಛಾವಣಿ ಹಾಗೂ ಒಂದು ಭಾಗದ ಗೋಡೆ ಸಂಪೂರ್ಣ ಕುಸಿದಿದೆ. ಮನೆಯಲ್ಲಿ ಮಲಗಿದ್ದವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಾದೇವ ಅವರ ಮೊಮ್ಮಗ ಶರತ್ (16)ಗೆ ಚಿಕ್ಕಪುಟ್ಟ ಗಾಯವಾಗಿದೆ. ಗ್ರಾಮ ಲೆಕ್ಕಿಗ ಮಾರುತಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ.
ಕಳೆದ ಒಂದು ವಾರದಿಂದ ಸುರಿಯುತ್ತಿರುವ ಜೋರು ಮಳೆ ಪರಿಣಾಮ ತಾಲೂಕಿನ ಗರಿಕೆಕಂಡಿ ಚೆಕ್‌ಪೋಸ್ಟ್ ಮೂಲಕ ತಮಿಳುನಾಡಿನ ಹಂದಿಯೂರಿಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಭೂ ಕುಸಿತ ಉಂಟಾಗಿದೆ. ಹಾಗಾಗಿ ಈ ಮಾರ್ಗದಲ್ಲಿ ಸಂಚಾರ ಬಂದ್ ಮಾಡಲಾಗಿದೆ.