ಹುಬ್ಬಳ್ಳಿ: ಲಾಕ್ಡೌನ್ ಸಂದರ್ಭದಲ್ಲಿ ಬಡವರಿಗೆ ಆಹಾರ ಸಾಮಗ್ರಿ ಕಿಟ್ ನೀಡುವ ವಿಷಯದಲ್ಲಿ ಕಾಂಗ್ರೆಸ್ನವರು ಮೊದಲು ತಾವು ಮಾಡಿದ್ದೇನು ಎಂಬುದನ್ನು ಅರಿತುಕೊಳ್ಳಲಿ ಎಂದು ಬಿಜೆಪಿ ಹು-ಧಾ ಸೆಂಟ್ರಲ್ ಕ್ಷೇತ್ರದ ವಕ್ತಾರ ರವಿ ನಾಯ್ಕ ತಿರುಗೇಟು ನೀಡಿದ್ದಾರೆ.
ಇನ್ಪೋಸಿಸ್ ಪ್ರತಿಷ್ಠಾನದ ಸುಧಾ ಮೂರ್ತಿಯವರು ನೀಡಿದ ಕಿಟ್ಗಳನ್ನು ಬಿಜೆಪಿಯವರು ತಮ್ಮದೇ ಕೊಡುಗೆ ಎಂಬಂತೆ ನೀಡಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಮುಖಂಡ ರಜತ ಉಳ್ಳಾಗಡ್ಡಿಮಠ ಶುಕ್ರವಾರ ಆರೋಪಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ರವಿ ನಾಯ್ಕ, ಹಳೇಹುಬ್ಬಳ್ಳಿ ಈಶ್ವರ ನಗರದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಇತ್ತೀಚೆಗೆ ಶಾಸಕರ ಉಪಸ್ಥಿತಿಯಲ್ಲಿ ಕಿಟ್ ವಿತರಣೆ ಕಾರ್ಯಕ್ರಮ ಏರ್ಪಾಟಾಗಿತ್ತು. ಸರ್ಕಾರಿ ಕಿಟ್ಗಳನ್ನು ಕೆಪಿಸಿಸಿ ಕೋವಿಡ್ ಕಾರ್ಯಪಡೆ ಜಿಲ್ಲಾಧ್ಯಕ್ಷರು ಸೇರಿ ಕಾಂಗ್ರೆಸ್ ಮುಖಂಡರೇ ವಿತರಿಸಿದ್ದಾರೆ. ಅವರಿಗೆ ಅಧಿಕಾರ ಇತ್ತೆ? ಈ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ರಾಜಕೀಯ ಮಾಡುತ್ತಿಲ್ಲವೆ ಎಂದು ಹೇಳಿಕೆಯಲ್ಲಿ ಖಾರವಾಗಿ ಪ್ರಶ್ನಿಸಿದ್ದಾರೆ.
ದುರುಪಯೋಗ ಮಾಡಿಲ್ಲ: ಬಡವರು ದೂರವಾಣಿ ಮೂಲಕ ಸಂರ್ಪಸಿ ಸಂಕಷ್ಟ ಹೇಳಿಕೊಂಡಿದ್ದರು. ಆದ್ದರಿಂದ, ಕರುಣಾಮಯಿಯಾಗಿರುವ ಸುಧಾಮೂರ್ತಿಯವರು ಒದಗಿಸಿದ ಕಿಟ್ಗಳನ್ನು ಬಡವರಿಗೆ ತಲುಪಿಸಿದ್ದೇನೆಯೇ ಹೊರತು ಪ್ರಚಾರ ಪಡೆಯುವ ಉದ್ದೇಶ ಹೊಂದಿಲ್ಲ. ಕಿಟ್ ತಲುಪಿಸಿರುವುದಕ್ಕೆ ಸಾಕ್ಷಿಯಾಗಿ ಫೋಟೋ ತೆಗೆದುಕೊಂಡಿದ್ದೇನೆ ಎಂದು ಬಿಜೆಪಿ ಪೂರ್ವ ವಿಧಾನಸಭೆ ಕ್ಷೇತ್ರಾಧ್ಯಕ್ಷ ಪ್ರಭು ನವಲಗುಂದಮಠ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಮತ್ತೆ ಆರೋಪ: ಕಾರ್ವಿುಕ ಇಲಾಖೆ ವತಿಯಿಂದ ಬಡವರಿಗೆ ಒದಗಿಸಿದ ಕಿಟ್ಗಳನ್ನು ಸಂಕಲ್ಪ ಜಗದೀಶ ಶೆಟ್ಟರ್, ಮಲ್ಲಿಕಾರ್ಜುನ ಸಾವಕಾರ ಸೇರಿ ಬಿಜೆಪಿ ಮುಖಂಡರು ವಿತರಿಸಿ ಸಾಮಾಜಿಕ ಜಾಲ ತಾಣದಲ್ಲಿ ಫೋಟೋ ಹಾಕಿಕೊಂಡಿದ್ದಾರೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಮುಖಂಡ ರಜತ ಉಳ್ಳಾಗಡ್ಡಿಮಠ ಆರೋಪಿಸಿದ್ದಾರೆ.