ಮಾಗಡಿ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದೇ ಗುರಿಯಾಗಿದೆ ಎಂದು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಹೇಳಿದರು.
ತಾಲೂಕಿನ ಪಾಲನಹಳ್ಳಿಯ ಶ್ರೀ ಶನೈಶ್ಚರ ಮಠದಲ್ಲಿ ಬುಧವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಮಠದಿಂದ ಪ್ರತಿ 5 ವರ್ಷಕ್ಕೊಮ್ಮೆ ನೀಡುವ ಶಿವಗಂಗೋತ್ರಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷಕ್ಕೆ ಹಗಲಿರುಳು ಶ್ರಮಿಸುತ್ತಿದ್ದು, 2023ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.
ತುಳಿತಕ್ಕೊಳಗಾದ ಸಮುದಾಯಗಳನ್ನು ಮೇಲೆತ್ತುವ ಕಾರ್ಯದಲ್ಲಿ ನಿರತವಾದ ಶ್ರೀಮಠ ಮೊದಲ ಬಾರಿಗೆ ಪ್ರಶಸ್ತಿ ನೀಡಲು ಆಹ್ವಾನಿಸಿದಾಗ ನಿರಾಕರಿಸಿದ್ದೆ. ಸಮುದಾಯಕ್ಕೆ ಮಾಡಿದ ಸೇವೆ ಹಾಗೂ 7 ಬಾರಿ ಸಂಸದನಾಗಿದ್ದನ್ನು ಗುರುತಿಸಿ ಪ್ರಶಸ್ತಿ ನೀಡಿದ್ದಕ್ಕೆ ಸಂತಸವಾಗಿದೆ. ಸರ್ವಧರ್ಮದ ಜನತೆಯ ಉದ್ದಾರದ ಹಲವಾರು ಆಯಾಮದಲ್ಲಿ ಸೇವೆ ನೀಡುತ್ತಿರುವ ಇಂತಹ ಮಠಗಳು ಬೆಳೆಯಬೇಕು ಎಂದರು.
ರಷ್ಯಾ&ಉಕ್ರೇನ್ ನಡುವಿನ ಯುದ್ಧ ನಿಂತು, ಶಾಂತಿ ಸ್ಥಾಪನೆಯಾಗಬೇಕು, ಕೇಂದ್ರ ವಿದೇಶಾಂಗ ಸಚಿವರು ಇನ್ನೂ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು. ಒಬ್ಬ ನಾಗರಿಕನಿಗೂ ಉಕ್ರೇನ್ನಲ್ಲಿ ತೊಂದರೆಯಾಗಬಾರದು, ಈ ಯುದ್ಧ ಎರಡು ದೇಶಗಳ ಆಂತರಿಕ ವಿಚಾರ, ಸಂಧಾನ ಒಂದೇ ಯುದ್ಧ ನಿಲ್ಲಲು ಪ್ರಮುಖ ಮಾರ್ಗ, ಎರಡು ದೇಶಗಳ ನಡುವೆ ಶಾಂತಿ ಸಮನ್ವಯತೆ ಸ್ಥಾಪಿಸಿ, ಅಕ್ಕಪಕ್ಕದ ಮಿತ್ರ ದೇಶಗಳು ಶಾಂತಿ ಮಾತುಕತೆಗೆ ವೇದಿಕೆ ಕಲ್ಪಿಸಬೇಕು ಎಂದರು.
ಪಾಲನಹಳ್ಳಿ ಮಠದ ಪೀಠಾಧ್ಯಕ್ಷ ಡಾ.ಶ್ರೀಸಿದ್ದರಾಜು ಸ್ವಾಮೀಜಿ ಮಾತನಾಡಿ, ಶ್ರೀಮಠದಿಂದ ಐದು ವರ್ಷಕೊಮ್ಮೆ ಶಿವಗಂಗೋತ್ರಿ ಪ್ರಶಸ್ತಿ ನೀಡಲಾಗುತ್ತಿದೆ. ಈಗಾಗಲೇ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ತಂದೆ ಹಾಗೂ ಸುಪ್ರೀಂ ಕೋರ್ಟ್ ವಕೀಲ ಧನಂಜಯ್ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ. ಈ ಬಾರಿ ಮಾಜಿ ಕೇಂದ್ರ ಸಚಿವರಿಗೆ ಪ್ರಶಸ್ತಿ ನೀಡಿರುವುದು ಸಮುದಾಯಕ್ಕೆ ಸಂದ ಪ್ರಶಸ್ತಿ ಎಂದು ಬಣ್ಣಿಸಿದರು.
ಎಂಎಲ್ಸಿ ಡಾ. ಎಲ್. ಹನುಮಂತಯ್ಯ ಮಾತನಾಡಿ, ಶೋಷಿತ ಸಮಾಜದಲ್ಲಿ ಆಧ್ಯಾತ್ಮಿಕ ಸಾಧನೆ ಕಡಿಮೆ, ಆದರೆ ಪಾಲನಹಳ್ಳಿ ಶ್ರೀಗಳು ವೇದ, ಉಪನಿಷತ್ ಕಲಿತಿರುವುದು ಶ್ಲಾನೀಯ. ಸಮಾಜ ಮನುಷ್ಯನನ್ನು ಕಾಪಾಡುವ ತೊಟ್ಟಿಲು. ಆದರೆ ಮೇಲು&ಕೀಳು ಸರಿಯಲ್ಲ. ಮಠಗಳಿಂದ ಜನರನ್ನು ಸರಿದಾರಿಗೆ ತಂದು ಅವಕಾಶ ವಂಚಿತ ಸಮುದಾಯಕ್ಕೆ ಶಿಕ್ಷಣ ನೀಡಲಿ ಎಂದು ತಿಳಿಸಿದರು.
ಬಿ.ಕೆ.ಹರಿಪ್ರಸಾದ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಲವು ಧಾರ್ಮಿಕ ಕಾರ್ಯ, ಉತ್ಸವಕ್ಕೆ ಚಾಲನೆ ನೀಡಿದರು. ಕೆಂಗೇರಿ ಓಂಕಾರ ಆಶ್ರಮದ ಶ್ರೀ ಮಧುಸೂದನಾನಂದ ಪುರಿ ಸ್ವಾಮೀಜಿ, ಕೊಡೀಹಳ್ಳಿಯ ಆದಿಜಾಂಬವ ಬೃಹನ್ಮಠದ ಶ್ರೀ ಷಡಕ್ಷರಿ ದೇಶೀಕೇಂದ್ರ ಸ್ವಾಮಿ, ರಾಜ್ಯಸಭಾ ಸದಸ್ಯ ಬಿ.ಸಿ. ಚಂದ್ರಶೇಖರ್, ಮಾಜಿ ಸಂಸದ ಚಂದ್ರಪ್ಪ, ಚಿಕ್ಕಬಳ್ಳಾಪುರ ಕೆಪಿಸಿಸಿ ಸದಸ್ಯ ವಿನಯ್ ಶ್ಯಾಮ್, ವೈದ್ಯ ಡಾ. ಆಂಜಿನಪ್ಪ, ರಾಜ್ಯ ಒಕ್ಕಲಿಗ ಸಂದ ಡಾ.ವಿ. ನಾರಾಯಣಸ್ವಾಮಿ, ದೊಡ್ಡೇರಿ ವೆಂಕಟೇಶ್, ಕೈಮಗ್ಗ ಮಂಡಳಿ ನಿದೇರ್ಶಕ ರಾಮಕೃಷ್ಣ, ಕೆಪಿಎಸ್ಸಿ ಮಾಜಿ ಅಧ್ಯಕ್ಷ ಗೋನಾಳ್ ಭೀಮಪ್ಪ, ಬಾಣವಾಡಿ ಪಂಚಾಯತಿ ಅಧ್ಯಕ್ಷ ಪ್ರಕಾಶ್, ಮಜಾ ಭಾರತ ಖ್ಯಾತಿಯ ಚಂದ್ರ ಪ್ರಭಾ, ಡಾ.ರಮೇಶ್, ಬಿಜೆಪಿ ಬೆ.ಗ್ರಾ. ಜಿಲ್ಲಾ ಕಾರ್ಯದರ್ಶಿ ಲತಾ ಇತರರು ಇದ್ದರು. ಶ್ರೀ ಭಗವತಿ ದೇವಿ ಟೆಂಪಲ್ ಟ್ರಸ್ಟ್ ಉದ್ಘಾಟಿಸಲಾಯಿತು.