ಜಿಲ್ಲೆ

ಕಾಂಗ್ರೆಸ್ಸಿನಲ್ಲಿ ಒಡಕು, ದಳಪತಿಗಳ ತಾಕತ್ತು

ಕೋಲಾರ: ಕಾಂಗ್ರೆಸ್‌ನ ಒಡಕು, ದಳಪತಿಗಳ ತಾಕತ್ತಿನಿಂದ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಮೇಲುಗೈ ಸಾಧಿಸಿದೆಯಾದರೂ ಅಧ್ಯಕ್ಷ ಸ್ಥಾನಕ್ಕೆ ನಿಗದಿಪಡಿಸಿರುವ ಮೀಸಲಾತಿ ಪ್ರಶ್ನಿಸಿ ಕಾಂಗ್ರೆಸ್ ಸದಸ್ಯೆಯೊಬ್ಬರು ಹೈಕೋರ್ಟ್‌ನಲ್ಲಿ ತಕರಾರು ಅರ್ಜಿ ಸಲ್ಲಿಸಿರುವುದರಿಂದ ಫಲಿತಾಂಶ ತಡೆಹಿಡಿಯಲಾಗಿದೆ.

ಉಪವಿಭಾಗಾಧಿಕಾರಿ ಸೋಮಶೇಖರ್ ಚುನಾವಣೆ ನಡೆಸಿದರು. ಮತದಾನದ ಹಕ್ಕು ಹೊಂದಿರುವ ಶಾಸಕ, ಎಂಎಲ್‌ಸಿ ಒಳಗೊಂಡಂತೆ ಒಟ್ಟು 38 ಸದಸ್ಯರ ಪೈಕಿ 28 ಮಂದಿ ಹಾಜರಿದ್ದರು. ಅಧ್ಯಕ್ಷ ಸ್ಥಾನಕ್ಕೆ 1ನೇ ವಾರ್ಡ್ ಜೆಡಿಎಸ್ ಸದಸ್ಯೆ ಶ್ವೇತಾ ಆರ್.ಶಬರೀಶ್ ಮತ್ತು 23ನೇ ವಾರ್ಡ್ ಕಾಂಗ್ರೆಸ್ ಸದಸ್ಯೆ ಅಜ್ರನಸ್ರೀನ್, ಉಪಾಧ್ಯಕ್ಷ ಸ್ಥಾನಕ್ಕೆ 2ನೇ ವಾರ್ಡ್ ಜೆಡಿಎಸ್ ಸದಸ್ಯ ಎಸ್.ಪ್ರವೀಣ್‌ಗೌಡ, ಪಕ್ಷೇತರ ಸದಸ್ಯ 11ನೇ ವಾರ್ಡ್ ಮಂಜುನಾಥ್ ಸ್ಪರ್ಧಿಸಿದ್ದರು.

ಪಕ್ಷಗಳ ಬಲಾಬಲ: ನಗರಸಭೆಗೆ ಕಾಂಗ್ರೆಸ್-12, ಜೆಡಿಎಸ್-8, ಪಕ್ಷೇತರರು-8, ಎಸ್‌ಡಿಪಿಐ-4, ಬಿಜೆಪಿ-3 ಸದಸ್ಯರು ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನ ಬಿಸಿಎಂ (ಎ) ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಜೆಡಿಎಸ್‌ನ ಶ್ವೇತಾ ಮತ್ತು ಎಸ್.ಪ್ರವೀಣ್‌ಗೌಡರಿಗೆ ಜೆಡಿಎಸ್-8, ಎಸ್‌ಡಿಪಿಐ-2, ಬಿಜೆಪಿ-1, ಪಕ್ಷೇತರರು-7, ಶಾಸಕ ಕೆ.ಶ್ರೀನಿವಾಸಗೌಡ ಹಾಗೂ ಎಂಎಲ್‌ಸಿ ಗೋವಿಂದರಾಜು ಸೇರಿ ಒಟ್ಟು 20 ಮಂದಿ ಮತ ಚಲಾಯಿಸಿದರೆ, ಕಾಂಗ್ರೆಸ್ಸಿನ ಅಜ್ರನಸ್ರೀನ್ ಮತ್ತು ಮಂಜುನಾಥ್‌ಗೆ ಕಾಂಗ್ರೆಸ್ಸಿನ 7 ಹಾಗೂ ಪಕ್ಷೇತರ-1 ಸೇರಿ ಒಟ್ಟು 8 ಮತ ಲಭಿಸಿದೆ.

ರೋಸ್ಟರ್ ಪದ್ಧತಿ ಪ್ರಕಾರ ಅಧ್ಯಕ್ಷ ಸ್ಥಾನ ಪ.ಜಾತಿ ಮಹಿಳೆಗೆ ಮೀಸಲಾಗಬೇಕೆಂದು ಕಾಂಗ್ರೆಸ್ ಸದಸ್ಯೆ ಭಾಗ್ಯಮ್ಮ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರಿಂದ ಚುನಾವಣೆ ನಡೆದರೂ ಫಲಿತಾಂಶ ಪ್ರಕಟಿಸದಂತೆ ಕೋರ್ಟ್ ಸೂಚಿಸಿದ್ದ ಮೇರೆಗೆ ಚುನಾವಣಾಧಿಕಾರಿ ಕರ್ತವ್ಯ ನಿರ್ವಹಿಸಿದ್ದಾರೆ.

ಮತಕ್ಕೆ ಕರೊನಾ ಕಾಟ: ಕಾಂಗ್ರೆಸ್ಸಿನ ಪ್ರಸಾದಬಾಬು ಕರೊನಾದಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅಭ್ಯರ್ಥಿಗಳಿಗೆ ಮತ ಅಗತ್ಯವಿದ್ದಲ್ಲಿ ವೈದ್ಯರ ಅನುಮತಿ ಪಡೆದು ಪಿಪಿಇ ಕಿಟ್‌ನೊಂದಿಗೆ ಹಾಜರಾಗಬೇಕಿತ್ತು. ಪಕ್ಷಕ್ಕೆ ಹಿನ್ನಡೆಯಾಗುವ ಸುಳಿವಿನಿಂದ ಆಸ್ಪತ್ರೆಯಲ್ಲಿ ಉಳಿದುಕೊಂಡಿದ್ದರು.

ಗೈರಾದವರು: ಎಂಎಲ್‌ಸಿ ನಸೀರ್ ಅಹಮ್ಮದ್ ಬಣದಲ್ಲಿ ಗುರುತಿಸಿಕೊಂಡಿದ್ದ ಕಾಂಗ್ರೆಸ್‌ನ ಸೈಯದ್ ಅಪ್ಸರ್, ಮಬೀನಾ ತಾಜ್, ನಾಜೀಯಾ ತಾಜ್ ಗೈರಾಗಿರುವುದು ಅಚ್ಚರಿ ಮೂಡಿಸಿದೆ. ಅಧ್ಯಕ್ಷ ಸ್ಥಾನಕ್ಕೆ ಬಿಸಿಎಂ (ಎ) ವರ್ಗಕ್ಕೆ ಮೀಸಲಾಗಿದ್ದನ್ನು ಪ್ರಶ್ನಿಸಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿರುವ ಕಾಂಗ್ರೆಸ್ ಭಾಗ್ಯಮ್ಮ ಚುನಾವಣೆಯಿಂದ ದೂರ ಉಳಿದಿದ್ದರು.

ಕೈ ಒಡಕಿನ ಲಾಭ: ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಮತ್ತು ಎಂಎಲ್‌ಸಿ ನಸೀರ್ ಅಹಮ್ಮದ್ ಜತೆಗೂಡಿ ಕಾರ್ಯಾಚರಣೆ ನಡೆಸಿದ್ದರೆ ದಳಪತಿಗಳ ತಂತ್ರಗಾರಿಕೆ ಮುರಿಯಬಹುದಿತ್ತು. ಇವರಿಬ್ಬರ ನಡುವಿನ ರಾಜಕೀಯ ವೈಮನಸ್ಸು ಪಕ್ಷಕ್ಕೆ ಹಾನಿ ತಂದಿದೆ. ಮುನಿಯಪ್ಪ ಕೂಡ ಕೋಲಾರ ನಗರಸಭೆ ವಿಚಾರ ಕೈಬಿಟ್ಟು ಪುತ್ರಿ ಪ್ರತಿನಿಧಿಸುವ ಕೆಜಿಎಫ್‌ನ ರಾಬರ್ಟ್‌ಸನ್‌ಪೇಟೆ ನಗರಸಭೆ ಚುನಾವಣೆಯಲ್ಲಿ ಕೈ ಪಡೆ ಗೆಲ್ಲುವುದಕ್ಕೆ ಆಸಕ್ತಿ ತೋರಿದ್ದರು.

ಮಂಡಿಯೂರಿದ ಕೈ ಪಡೆ: ನಗರಸಭೆಯಲ್ಲಿ ಕೈ ದರ್ಬಾರಿಗೆ ಕಾರ್ಯತಂತ್ರ ರೂಪಿಸಲು ಕೆಪಿಸಿಸಿಯಿಂದ ನಿಯೋಜನೆಗೊಂಡಿದ್ದ ಎಂಎಲ್‌ಸಿ ಗೋವಿಂದರಾಜು 3 ದಿನಗಳಿಂದ ಮೊಕ್ಕಾಂ ಹೂಡಿದ್ದರು. ನಗರಸಭೆಯಲ್ಲಿ ಹಿಡಿತ ಸಾಧಿಸುವ ಸಲುವಾಗಿ ಎಂಎಲ್‌ಸಿ ನಸೀರ್ ಅಹಮ್ಮದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಜತೆಗೆ ಶನಿವಾರ ರಾತ್ರಿ ಜೆಡಿಎಸ್ ಶಾಸಕ ಕೆ.ಶ್ರೀನಿವಾಸಗೌಡರ ಮನೆಗೆ ತೆರಳಿ, ಅಧಿಕಾರ ಹಂಚಿಕೆಗೆ ಮಂಡಿಯೂರಿದರಾದರೂ ದಳಪತಿ ಜಗ್ಗಲಿಲ್ಲ.

ವಿಳಂಬ ನೀತಿಯಿಂದ ಪೆಟ್ಟು: ಕಾಂಗ್ರೆಸ್‌ನ 12 ಸದಸ್ಯರಲ್ಲಿ ಒಗ್ಗಟ್ಟು ಮೂಡಿಸುವಲ್ಲಿ ಮುಖಂಡರು ವಿಳಂಬ ಮಾಡಿದ್ದಾರೆ. ಎಸ್‌ಡಿಪಿಐ ಸದಸ್ಯರ ಸೆಳೆಯಲು ಮೀನಮೇಷ ಎಣಿಸಲಾಗಿದ್ದು, ಜೆಡಿಎಸ್ ಗಾಳಕ್ಕೆ ಸಿಕ್ಕಿದ್ದ ಪಕ್ಷೇತರರನ್ನು ಸೆಳೆಯುವಲ್ಲಿ ವಿಫಲವಾಗಿದ್ದಾರೆ. ನಸೀರ್ ಅಹಮ್ಮದ್ 3 ದಿನಗಳ ಹಿಂದೆ ನಡೆಸಿದ ಪ್ರಯತ್ನವನ್ನು ವಾರದ ಮುಂಚೆ ಮಾಡಿದ್ದರೆ, ಎಲ್ಲ ಪಕ್ಷಗಳ ಸದಸ್ಯರೊಂದಿಗೆ ಒಡನಾಟ ಹೊಂದಿರುವ ಸದಸ್ಯ ಬಿ.ಎಂ.ಮುಬಾರಕ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್ ಕುಮಾರ್‌ಗೆ ಜವಾಬ್ದಾರಿ ನೀಡಿದ್ದರೆ ಪಕ್ಷಕ್ಕೆ ಹಿನ್ನಡೆ ಆಗುತ್ತಿರಲಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯಿತು ಎನ್ನಲಾಗಿದೆ.

ಎಸ್‌ಡಿಪಿಐಗೆ ನಿರಾಸೆ: 4 ಸದಸ್ಯರನ್ನು ಹೊಂದಿದ್ದ ಎಸ್‌ಡಿಪಿಐ ಕಾಂಗ್ರೆಸ್ ಬೆಂಬಲಿಸಿದ್ದಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬಹುದಿತ್ತು. ಇವರಲ್ಲೂ ಇಬ್ಬರು ಜೆಡಿಎಸ್‌ಗೆ ಮತ ಹಾಕಿದ್ದರೆ ಇಬ್ಬರು ಗೈರಾಗಿದ್ದರು. ಬಿಜೆಪಿಯಿಂದ ವಿಪ್ ಜಾರಿ ಮಾಡದ ಕಾರಣ ಸದಸ್ಯೆ ರಂಗಮ್ಮ ಜೆಡಿಎಸ್ ಬೆಂಬಲಿಸಿದ್ದರು. ಇನ್ನಿಬ್ಬರು ದೂರ ಉಳಿದಿದ್ದರು.

ವಿಶೇಷ ಭದ್ರತೆಗೆ ವ್ಯವಸ್ಥೆ: ಕರೊನಾದಿಂದ ಆಸ್ಪತ್ರೆ ಸೇರಿರುವ ಸದಸ್ಯ ಪ್ರಸಾದ್‌ಬಾಬು ಮತದಾನದಲ್ಲಿ ಭಾಗವಹಿಸಲು ಬಂದಲ್ಲಿ ವಿಶೇಷ ಭದ್ರತೆ ಅಗತ್ಯವೆಂದು ಚುನಾವಣಾಧಿಕಾರಿ ಎಸಿ ಸೋಮಶೇಖರ್ ವೈದ್ಯ ಸಿಬ್ಬಂದಿಯನ್ನು ಕರೆಸಿದ್ದರು, ಪಿಪಿಇ ಕಿಟ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಸದಸ್ಯ ಗೈರಾಗಿದ್ದರು.

ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದೆ. ಫಲಿತಾಂಶ ಘೋಷಣೆ ನ್ಯಾಯಾಲಯದ ಆದೇಶಕ್ಕೆ ಒಳಪಟ್ಟಿದೆ. ಕೊರ್ಟ್ ಆದೇಶದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಸೋಮಶೇಖರ್, ಚುನಾವಣಾಧಿಕಾರಿ, ಕೋಲಾರ ವಿಪ್ ಜಾರಿ ಉಲ್ಲಂಘಿಸುವ ಸದಸ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಸಲ್ಲಿಸಿರುವ ಅರ್ಜಿ ಸಂಬಂಧ ಚುನಾವಣಾಧಿಕಾರಿಗಳ ಸೂಚನೆಯಂತೆ ಪರಿಶೀಲಿಸಿ ವರದಿ ಮಾಡಲಾಗುವುದು. ಶ್ರೀಕಾಂತ್, ನಗರಸಭೆ ಪೌರಾಯುಕ್ತ