ಬೇಲೂರು: ಧರ್ಮ ಕೇಳಿ ಗುಂಡಿಕ್ಕಿ ಹತ್ಯೆ ಮಾಡಿದವರಿಗೆ ಅಪರೇಷನ್ ಸಿಂಧೂರದ ಮೂಲಕ ತಕ್ಕ ಉತ್ತರ ನೀಡಿದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರಕ್ಕೆ ಕಾಂಗ್ರೆಸಿಗರು ಸಾಕ್ಷಿ ಕೇಳುವ ಮೂಲಕ ನಮ್ಮ ಸೈನಿಕರ ಶೌರ್ಯ, ಸಾಹಸಕ್ಕೆ ಅವಮಾನ ಮಾಡಿದ್ದಾರೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.
ಖಾಸಗಿ ಕಾರ್ಯಕ್ರಮದ ನಿಮಿತ್ತ ಬೇಲೂರಿಗೆ ಆಗಮಿಸಿದ್ದ ಅವರು ಶಾಸಕ ಎಚ್.ಕೆ.ಸುರೇಶ್ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಾಕಿಸ್ತಾನದ ಮೇಲೆ ಯುದ್ದ ತರವಲ್ಲ ಎನ್ನುವ ಕಾಂಗ್ರೆಸ್ ಪಕ್ಷಕ್ಕೆ ಯುದ್ಧ ವಿರಾಮದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ. ಕಾಂಗ್ರೆಸ್ ಪಕ್ಷದ ಕೆಲ ಮುಖಂಡರು ಯುದ್ಧದ ಅನಿವಾರ್ಯತೆ ಬಗ್ಗೆ ಬೆಂಬಲ ನೀಡಿದ್ದಾರೆ. ಆದರೆ 2ನೇ ಸಾಲಿನ ನಾಯಕರಾದ ಮಂಜುನಾಥ್, ದಿನೇಶ್ ಗುಂಡೂರಾವ್, ಸಂತೋಷ್ ಲಾಡ್ ಮತ್ತು ಪ್ರಿಯಾಂಕ್ ಖರ್ಗೆ ಸಾಕ್ಷಿ ಕೇಳುತ್ತಿರುವುದು ಶೋಚನೀಯ ಸಂಗತಿ ಎಂದು ಟೀಕಿಸಿದರು.
ಪಾಕಿಸ್ತಾನ ಭಾಗವಾಗುವ ಸಂದರ್ಭ ಮೂಲ ಭಯೋತ್ಪಾದಕರು ಪಾಕಿಸ್ತಾನಕ್ಕೆ ಹೋಗಿದ್ದಾರೆ. ಆಂತರಿಕ ಭಯೋತ್ಪಾದಕರು ಭಾರತದಲ್ಲೇ ಉಳಿದರು. ಅವರೇ ಕಾಂಗ್ರೆಸ್ಸಿಗರು. ರಾಜ್ಯ ಸರ್ಕಾರ ಕೇವಲ ಗ್ಯಾರಂಟಿ ಮೇಲೆ ಎರಡು ವರ್ಷ ಪೂರೈಸಿದೆ. ಅಲ್ಲದೆ, ಯಾವುದೇ ಅನುದಾನವಿಲ್ಲದೆ ಅಭಿವೃದ್ಧಿ ಮರೆತು ಕುರ್ಚಿಗಾಗಿ ಕಚ್ಚಾಡುತ್ತಿರುವುದೇ ಎರಡು ವರ್ಷದ ಸಾಧನೆಯಾಗಿದೆ. ಭ್ರಷ್ಟಾಚಾರದಲ್ಲಿರುವ ಸರ್ಕಾರ ತನ್ನ ತಪ್ಪು ಮುಚ್ಚಿಕೊಳ್ಳಲು ಜಾತಿ ಜನಗಣತಿ, ಒಳ ಮೀಸಲಾತಿ ಮುಂದಿಟ್ಟು ಜನರ ದಿಕ್ಕು ತಪ್ಪಿಸಲು ಮುಂದಾಗಿದೆ. ಐದು ಗ್ಯಾರಂಟಿಗಳನ್ನು ನೀಡಿದ ರಾಜ್ಯ ಸರ್ಕಾರ ಹಾಲಿನಿಂದ ಆಲ್ಕೋಹಾಲ್ ತನಕ ಬೆಲೆ ಏರಿಕೆ ಮಾಡಿ ಮಹಿಳೆಯರಿಗೆ 2 ಸಾವಿರ ರೂ. ನೀಡಿ, 20 ಸಾವಿರ ರೂ.ವಾಪಸ್ ಪಡೆಯುತ್ತಿದೆ. ಇವರ ಆಟ ರಾಜ್ಯದಲ್ಲಿ ಇನ್ಮುಂದೆ ನಡೆಯುವುದಿಲ್ಲ ಎಂದರು.
ರಾಜ್ಯ ಸರ್ಕಾರದ ಸಾಧನೆ ಶೂನ್ಯ. ಸರ್ಕಾರ ನಡೆಸುತ್ತಿರುವ ಒಳ ಮೀಸಲಾತಿ ಸಮೀಕ್ಷೆ ಬಗ್ಗೆ ನಮ್ಮ ಅಸಮಾಧಾನವಿದೆ. ದಾಖಲೆ ಇಲ್ಲದೆ ಕಾಟಾಚಾರದ ಸಮೀಕ್ಷೆ ನಡೆಯುತ್ತಿದೆ. ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ ನಡೆಸುವಂತೆ ನ್ಯಾಯಾಲಯ ಸರ್ಕಾರಕ್ಕೆ ಛೀಮಾರಿ ಹಾಕಿದರೂ ಸರ್ಕಾರ ಸೋಲಿನ ಭಯದಿಂದ ಚುನಾವಣೆಗೆ ಮುಂದಾಗುತ್ತಿಲ್ಲ. ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ವೈಯಕ್ತಿಕವಾಗಿ ಟೀಕೆ ಮಾಡುವವರ ವಿರುದ್ಧ ಪಕ್ಷ ಶಿಸ್ತುಕ್ರಮ ಕೈಗೊಳ್ಳಲಿದೆ ಎಂದರು.
ಶಾಸಕ ಎಚ್.ಕೆ.ಸುರೇಶ್, ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ, ಬಿಜೆಪಿ ತಾಲೂಕು ಅಧ್ಯಕ್ಷ ಸಂಜು ಕೌರಿ, ಮುಖಂಡರಾದ ರೇಣುಕುಮಾರ್, ಪರ್ವತಯ್ಯ ಇದ್ದರು.