ಜಿಲ್ಲೆ

ಕಾಂಗ್ರೆಸ್​ನಿಂದ ಜನವಿರೋಧಿ ನೀತಿ

ತುಮಕೂರು: ರಾಜ್ಯ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದ್ದು, ಗ್ಯಾರಂಟಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಎಸ್​ಸಿಪಿ, ಟಿಎಸ್​ಪಿ ಅನುದಾನ ಬಳಸಿಕೊಂಡು ದಲಿತ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಜೆಡಿಎಸ್​ ಜಿಲ್ಲಾಧ್ಯಕ್ಷ ಆರ್​.ಸಿ.ಆಂಜನಪ್ಪ ಆರೋಪಿಸಿದರು.

ರಾಜ್ಯ ಸರ್ಕಾರದ ವಿರುದ್ಧ ಗುರವಾರ ನಗರದಲ್ಲಿ ಜೆಡಿಎಸ್​ನಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಜೆಡಿಎಸ್​ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪಾದಯಾತ್ರೆಯಲ್ಲಿ ಆಗಮಿಸಿದ ಮುಖಂಡರನ್ನು ಉದ್ದೇಶಿಸಿ, ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಾತನಾಡಿದ ಅವರು, ರಾಜ್ಯ ಸರ್ಕಾರ ಜನಹಿತ ಮರೆತು ಆಡಳಿತ ನಡೆಸುತ್ತಿದೆ ಎಂದರು. ಯಾವುದೇ ಅಭಿವೃದ್ಧಿ ಕೆಲಸ ಮಾಡದ ಕಾಂಗ್ರೆಸ್​ ಸರ್ಕಾರ, ದಿನಬಳಕೆ ಪದಾರ್ಥಗಳ ಬೆಲೆ ಏರಿಕೆ ಮಾಡಿ ಜನಸಾಮಾನ್ಯರಿಗೆ ಹೊರೆ ಮಾಡಿದೆ. ಚುನಾವಣೆ ವೇಳೆ ಘೋಷಿಸಿದ ಐದು ಗ್ಯಾರಂಟಿ ಯೋಜನೆಗಳಿಗಾಗಿ ದಲಿತ ಸಮುದಾಯಗಳಿಗೆ ಅನ್ಯಾಯ ಮಾಡಿದೆ. ಪ್ರತಿ ತಿಂಗಳು ನೀಡಬೇಕಾದ ಗ್ಯಾರಂಟಿ ಯೋಜನೆ ಹಣವನ್ನು ಚುನಾವಣೆ ಸಂದರ್ಭದಲ್ಲಿ ಕೊಟ್ಟು ಅಧಿಕಾರ ಹಿಡಿಯುವ ಹುನ್ನಾರ ಮಾಡಿಕೊಂಡು ಬರುತ್ತಿದ್ದಾರೆ ಎಂದರು.

ಕಾಂಗ್ರೆಸ್​ ಅಧಿಕಾರಕ್ಕೆ ಬಂದಾಗಿನಿಂದ ಭ್ರಷ್ಟಾಚಾರಕ್ಕೆ ಒತ್ತುಕೊಟ್ಟಿದೆ, ರಾಜ್ಯದಲ್ಲಿ ಶಾಂತಿಸುವ್ಯವಸ್ಥೆ ಹಾಳಾಗಿದೆ. ಪೊಲೀಸರ ಮೇಲೆಯೇ ದಾಳಿ ಮಾಡುವ ಪ್ರಕರಣಗಳೂ ನಡೆಯುತ್ತಿವೆ. ಜನಸಾಮಾನ್ಯರಿಗೆ ರಕ್ಷಣೆ ಇಲ್ಲದಂತಾಗಿದೆ. ಇಂತಹ ಕೆಟ್ಟ ಸರ್ಕಾರ ತೊಲಗಬೇಕು. ರಾಜ್ಯಪಾಲರು ಸರ್ಕಾರಕ್ಕೆ ಚಾಟಿ ಬೀಸಿ ಸರಿಯಾದ ದಿಕ್ಕಿನಲ್ಲಿ ನಡೆಯಲು ಕ್ರಮ ತೆಗೆದುಕೊಳ್ಳಬೇಕು ಎಂದರು. ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿ, ರಾಜ್ಯ ಕಾಂಗ್ರೆಸ್​ ಸರ್ಕಾರದ ದುರಾಡಳಿತ ಖಂಡಿಸಿ ರಾಜ್ಯಾದ್ಯಂತ ಜೆಡಿಎಸ್​ ಹೋರಾಟ ಮಾಡುತ್ತಿದೆ. ಚುನಾವಣೆ ಗೆಲ್ಲಲು ಗ್ಯಾರಂಟಿ ಯೋಜನೆಗಳನ್ನು ಬಳಸಿಕೊಳ್ಳುತ್ತಿರುವ ಕಾಂಗ್ರೆಸ್​ ಇದರ ಹೊರತಾಗಿ ಯಾವುದೇ ಜನಪರ ಕಾರ್ಯಕ್ರಮಗಳನ್ನು ಮಾಡುತ್ತಿಲ್ಲ. ಕೊಟ್ಟ ಮಾತಿನಂತೆ ಪ್ರತಿ ತಿಂಗಳು ಗ್ಯಾರಂಟಿ ಯೋಜನೆಗಳ ಹಣವನ್ನು ಫಲಾನುಭವಿಗಳಿಗೆ ತಲುಪಿಸುತ್ತಿಲ್ಲ ಎಂದರು. ಸಿದ್ದರಾಮಯ್ಯ ಅವರು 16ನೇ ಬಜೆಟ್​ ಮಂಡಿಸುತ್ತಿದ್ದು, ಇದೂವರೆಗೆ ಬಜೆಟ್​ನಲ್ಲಿ ಘೋಷಿಸಿದ ಕಾರ್ಯಕ್ರಮಗಳು ಕಾಗದದಲ್ಲೇ ಉಳಿದಿವೆ ಹೊರತು ಅನುಷ್ಠಾನಕ್ಕೆ ಬಂದಿಲ್ಲ. ಇದ ಕಾಂಗ್ರೆಸ್​ ಆಡಳಿತದ ಪರಿ. ಸರ್ಕಾರದ ದುರಾಡಳಿತದ ವಿರುದ್ಧ ಜನ ಬೇಸತ್ತು ಶಾಪ ಹಾಕುತ್ತಿದ್ದಾರೆ, ಮುಂಬರುವ ಚುನಾವಣೆಗಳಲ್ಲಿ ಜನ ಕಾಂಗ್ರೆಸ್​ಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.

ಜಿಲ್ಲಾ ಜೆಡಿಎಸ್​ ಕಾರ್ಯಾಧ್ಯಕ್ಷ ಟಿ.ಆರ್​.ನಾಗರಾಜು ಮಾತನಾಡಿ, ಪದಾರ್ಥಗಳ ಬೆಲೆ ಏರಿಕೆ, ಬಸ್​ ಪ್ರಯಾಣದರ, ವಿದ್ಯುತ್​ ದರ ಏರಿಕೆ ಮಾಡಿರುವ ಕಾಂಗ್ರೆಸ್​ ಸರ್ಕಾರದಿಂದ ರಾಜ್ಯದ ಜನರು ಉತ್ತಮ ಆಡಳಿತವನ್ನು ನಿರೀಕ್ಷೆ ಮಾಡುವಂತಿಲ್ಲ, ಎಲ್ಲ ರಂಗಗಳಲ್ಲೂ ವಿಫಲವಾಗಿರುವ ಸರ್ಕಾರವನ್ನು ವಜಾ ಮಾಡಿ ರಾಷ್ಟ್ರಪತಿಗಳ ಆಡಳಿತ ಜಾರಿ ಮಾಡಬೇಕು ಎಂದು ಮನವಿ ಮಾಡಿದರು. ಮಾಜಿ ಶಾಸಕ ಪಿ.ಆರ್​.ಸುಧಾಕರಲಾಲ್​, ಜೆಡಿಎಸ್​ ರಾಜ್ಯ ಎಸ್ಟಿ ಮೋರ್ಚಾ ಉಪಾಧ್ಯಕ್ಷ ಕೃಷ್ಣಮೂರ್ತಿ, ಮುಖಂಡರಾದ ತಿಮ್ಮಾರೆಡ್ಡಿ, ಯೋಗಾನಂದ, ಟಿ.ಎಲ್​.ಕುಂಭಯ್ಯ, ರಂಗಶಾಮಯ್ಯ, ಶ್ರೀನಿವಾಸ ಪ್ರಸಾದ್​, ಟಿ.ಎಚ್​.ಜಯರಾಮ್​, ಗಂಗಣ್ಣ, ಶ್ರೀರಾಮ್​, ಗೋವಿಂದರಾಜು, ಗಣೇಶ್​, ಕುಸುಮಾ, ತಾಹೇರಾ ಕುಲ್ಸಂ, ಲೀಲಾವತಿ, ಕಾಮರಾಜು, ಬಸವರಾಜು, ಕುಮಾರ್​, ಮಧುಗೌಡ, ನಾಗೇಶ್​ ಇದ್ದರು.