???????????????????????????????????? 
ಜಿಲ್ಲೆ

ಕಾಂಗ್ರೆಸ್‌ನಿಂದ ಕ್ಷೇತ್ರ ಅಭಿವೃದ್ಧಿ ಸಾಧ್ಯ

ಹನೂರು: ಕ್ಷೇತ್ರ ಅಭಿವೃದ್ಧಿಯಾಗಬೇಕಾದರೆ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಆದ್ದರಿಂದ ಮುಂಬರುವ ಚುನಾವಣೆಯಲ್ಲೂ ಕಾಂಗ್ರೆಸ್ ಗೆಲ್ಲಿಸಿದರೆ ಕ್ಷೇತ್ರಕ್ಕೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಶಾಸಕ ಆರ್.ನರೇಂದ್ರ ತಿಳಿಸಿದರು.

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಂಗಲ ಹಾಗೂ ಕಾಮಗೆರೆ ಗ್ರಾಮದಲ್ಲಿ ಶನಿವಾರ ಕೆಆರ್‌ಐಡಿಎಲ್ 55 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಕ್ಷೇತ್ರದಲ್ಲಿ ಗಿರಿಜನರ ಹಾಡಿಗಳು ಸೇರಿದಂತೆ ಎಸ್ಸಿ, ಎಸ್ಟಿ ವರ್ಗದ ಜನರು ವಾಸಿಸುವ ಬಹುತೇಕ ಕಾಲನಿಗಳಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಿಸಲಾಗಿತ್ತು. ಆದರೆ ಕೆಲವು ಗ್ರಾಮಗಳಲ್ಲಿ ಸಾಮಾನ್ಯ ವರ್ಗದ ಜನರು ವಾಸಿಸುವ ಕಾಲನಿಗಳಲ್ಲಿ ಅನುದಾನದ ಕೊರತೆಯಿಂದ ರಸ್ತೆ, ಚರಂಡಿ ನಿರ್ಮಿಸಲು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಆಯಾ ಗ್ರಾಮಗಳಲ್ಲಿ ಗ್ರಾಮಸ್ಥರು ಮನವಿ ಮಾಡಿದ್ದರು. ಈ ದಿಸೆಯಲ್ಲಿ ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ ಮಂಗಲ ಗ್ರಾಮದಲ್ಲಿ 30 ಲಕ್ಷ ರೂ. ಹಾಗೂ ಕಾಮಗೆರೆ ಗ್ರಾಮದಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದು ಹೇಳಿದರು.

ಹನೂರು ಕಾಂಗ್ರೆಸ್‌ನ ಭದ್ರಕೋಟೆ. ಕಾಂಗ್ರೆಸ್ ಪಕ್ಷದ ಸಿದ್ಧಾಂತ ಹಾಗೂ ಸರ್ಕಾರದ ಅವಧಿಯಲ್ಲಿ ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳೇ ಗೆಲುವಿಗೆ ಶ್ರೀರಕ್ಷೆಯಾಗಲಿದೆ. ಈ ದಿಸೆಯಲ್ಲಿ ನನ್ನನ್ನು 3 ಬಾರಿ ಗೆಲ್ಲಿಸುವುದರ ಮೂಲಕ ತಮ್ಮ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದು, ಹಲವು ಅಭಿವೃದ್ಧಿ ಕಾರ್ಯಗಳು ನಡೆದಿದೆ. ಹನೂರು ತಾಲೂಕು ರಚನೆ, ಕೆ.ಶಿಫ್ ಯೋಜನೆಯಡಿ ರಸ್ತೆ ಅಭಿವೃದ್ಧಿ ಅನುಷ್ಠಾನ, ನದಿ ಮೂಲದಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನ, ಪಿಯು ಕಾಲೇಜುಗಳ ಮಂಜೂರು, ಏಕಲವ್ಯ, ಮುರಾರ್ಜಿ ಹಾಗೂ ಇಂದಿರಾಗಾಂಧಿ ಮಾದರಿ ವಸತಿ ಶಾಲೆಗಳ ಸ್ಥಾಪನೆ, ಮೆಟ್ರಿಕ್ ಪೂರ್ವ ಮತ್ತು ನಂತರದ ವಿದ್ಯಾರ್ಥಿ ನಿಲಯಗಳ ಸ್ಥಾಪನೆ, ಸಮುದಾಯ ಭವನಗಳ ನಿರ್ಮಾಣ, ರಸ್ತೆಗಳ ಅಭಿವೃದ್ಧಿ, ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಫಲಾನುಭವಿಗಳಿಗೆ ಸವಲತ್ತು ವಿತರಣೆ, ಗಿರಿಜನರಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಜಮೀನು ಹಕ್ಕು ಪತ್ರ ವಿತರಣೆ, ರಾಜ್ಯದಲ್ಲಿಯೇ ಮೊದಲ ಬಾರಿಗೆ ಗಿರಿಜನರಿಗೆ ಗ್ಯಾಸ್ ಸಿಲಿಂಡರ್ ವಿತರಣೆ ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಕಾರ್ಯಗಳು ನಡೆದಿವೆ. ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಇದು ಕ್ಷೇತ್ರದ ಜನರಿಗೂ ತಿಳಿಸಿದೆ. ಆದಾಗ್ಯೂ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಆಗಬೇಕಿದ್ದು, ಕಾಂಗ್ರೆಸ್ ಬಗ್ಗೆ ಜನರಲ್ಲಿ ಉತ್ತಮ ಒಲವಿದೆ. ಆದ್ದರಿಂದ ಈ ಬಾರಿಯೂ ನನ್ನನ್ನು ಗೆಲ್ಲಿಸುವುದರ ಮೂಲಕ ತಮ್ಮ ಸೇವೆ ಮಾಡಲು ಅವಕಾಶ ನೀಡುವಂತೆ ಮನವಿ ಮಾಡಿದರು.

ಗ್ರಾಪಂ ಅಧ್ಯಕ್ಷ ಜಿ.ಕನಕರಾಜು, ಸದಸ್ಯ ಸಿ.ಪ್ರಭು, ಕೆಆರ್‌ಐಡಿಎಲ್ ಎಇಗಳಾದ ಶೋಭಾ, ಪುನೀತ್ ಮುಖಂಡರಾದ ಪುಟ್ಟರಾಜು, ರವೀಂದ್ರ, ವೀರಭದ್ರ, ದೊಡ್ಡತಮ್ಮಯ್ಯ, ಮಾದೇಶ್, ಚಿಕ್ಕಪುಟ್ಟ, ಸಿದ್ದಮರಿ, ತೀರ್ಥಪ್ರಸಾದ್, ಇಸ್ಮಾಯಿಲ್, ಸಿದ್ದರಾಜು ಹಾಗೂ ಇತರರು ಇದ್ದರು.