ಕಲಬುರಗಿ: ದೇಶದಲ್ಲಿ ಹಿಂದಿನಿಂದಲೂ ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಗಣೇಶ ಉತ್ಸವ, ಸರಸ್ವತಿ ಪೂಜೆ, ಗುರು ಪೂಜೆ, ರಾಷ್ಟ್ರ ನಾಯಕರ ಪೂಜೆ ಸಾಮಾನ್ಯ. ಅಲ್ಲಿ ಎಲ್ಲ ಜಾತಿ, ಧರ್ಮದ ವಿದ್ಯಾರ್ಥಿಗಳಿದ್ದು, ವಿಂಗಡಿಸಿದೆ ಅವರವರ ಧರ್ಮದ ಹಬ್ಬ, ಹರಿದಿನ ಆಚರಣೆಗೆ ಅವಕಾಶ ನೀಡಲಾಗುತ್ತಿದೆ. ಆದರೆ ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ನಡೆದಿರುವ ವ್ಯಾಸ ಮಹರ್ಷಿಗಳ ಸ್ಮರಣೆಯ ಗುರುಪೂಜಾ ಉತ್ಸವಕ್ಕೆ ಕೋಮುವಾದಿ ಬಣ್ಣ ಹಚ್ಚಿ, ವಿವಾದ ಮಾಡುತ್ತಿರುವ ಕಾಂಗ್ರೆಸ್ ನಿಲುವು ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಖಂಡಿಸಿದ್ದಾರೆ. ಗುರುಪೂಜೆಗೆ ತನ್ನದೇ ಇತಿಹಾಸವಿದ್ದು, ಶಿಕ್ಷಕರನ್ನು ಗುರುವಿನ ರೂಪದಲ್ಲಿ ಕಾಣುತ್ತೇವೆ. ಕೇಂದ್ರೀಯ ವಿವಿಯಲ್ಲಿ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು, ಇಚ್ಛೆಯಂತೆ ಆಚರಣೆಗೆ ಸಂಸ್ಥೆ ಅನುಮತಿ ನೀಡುತ್ತದೆ. ಆಚರಣೆ ಮೂಲಭೂತ ಹಕ್ಕು. ರಾಜ್ಯ ಕಾಂಗ್ರೆಸ್ ಸರ್ಕಾರ ಗುರುಪೂಜಾ ಉತ್ಸವವನ್ನು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಭಾವೈಕ್ಯತೆ ಬೆಳೆಸುವ ಕಾರ್ಯಕ್ರಮಗಳಿಗೆ ಬೆಂಬಲಿಸುವುದು ಬಿಟ್ಟು ರಾಜಕಾರಣಕ್ಕಾಗಿ ವಿರೋಧಿಸುವುದು ಕೋಮು ಭಾವನೆ ಬೆಳೆಸಿ, ಮನಸ್ಸಿನಲ್ಲಿ ವಿಷ ಬೀಜ ಬಿತ್ತುವುದನ್ನು ಪ್ರಕಟಣೆಯಲ್ಲಿ ಖಂಡಿಸಿದ್ದಾರೆ.