ಹಾಸನ: ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್‌ನಲ್ಲಿ ಅಧ್ಯಕ್ಷ ಸ್ಥಾನದ ನೇಮಕಕ್ಕೆ ಸಂಬಂಧಿಸಿದಂತೆ ಕಾರ್ಯಕರ್ತರಲ್ಲಿ ಅಸಮಾಧಾನ ಬುಗಿಲೆದಿದ್ದು, ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾರ್ಯಕರ್ತರು ರಾಜ್ಯ ನಾಯಕರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು.
ಏಳು ತಿಂಗಳ ಹಿಂದೆಯಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ತೊರೆದಿರುವ ಇ.ಎಚ್. ಲಕ್ಷ್ಮಣ್ ಅವರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದಕ್ಕೆ ಅಸಮಾಧಾನಗೊಂಡಿರುವ ಕಾರ್ಯಕರ್ತರನ್ನು ಸಮಾಧಾನಪಡಿಸುವ ಉದ್ದೇಶದಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಶುಕ್ರವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ಕರೆದಿದ್ದರು. ಆದರೆ ಕಾರ್ಯಾಧ್ಯಕ್ಷರಿಗೆ ಮಾತನಾಡಲು ಅವಕಾಶ ಇಲ್ಲದಂತೆ ಕಾಯಕರ್ತರು ಕಾಂಗ್ರೆಸ್ ರಾಜ್ಯ ನಾಯಕರ ನಡೆಯ ಕುರಿತು ಆಕ್ರೋಶಭರಿತರಾಗಿ ವಾಗ್ದಾಳಿ ನಡೆಸಿದರು.
ಪಕ್ಷಕ್ಕಾಗಿ ಹಲವಾರು ವರ್ಷಗಳ ಕಾಲ ದುಡಿದವರನ್ನು ಬಿಟ್ಟು ಆರ್‌ಎಸ್‌ಎಸ್ ಹಿನ್ನೆಲೆಯ ವ್ಯಕ್ತಿಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿರುವುದು ಎಷ್ಟು ಸರಿ? ಯಾರ ಅಭಿಪ್ರಾಯದ ಮೇಲೆ ಈ ನೇಮಕ ಮಾಡಿದಿರಿ? ಎಂದು ನೇರವಾಗಿ ತರಾಟೆಗೆ ತೆಗೆದುಕೊಂಡರು.
ಡೀಲ್ ಮಾಡಿಕೊಂಡಿದ್ದೀರಾ ಸ್ವಾಮಿ:
‘ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ನೇಮಕದಲ್ಲೂ ಡೀಲ್ ಮಾಡಿಕೊಂಡಿದ್ದಿರಾ ಸ್ವಾಮಿ, ನೀವು ಡೀಲ್ ಮಾಡಿಕೊಂಡು ನಮ್ಮನೆ ಏಕೆ ಹಾಳು ಮಾಡುತ್ತಿದ್ದೀರಿ’ ಎಂಬುದಾಗಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಹಿಂದೆ ಜಡಿಎಸ್‌ನೊಂದಿಗೆ ಒಪ್ಪಂದ ಮಾಡಿಕೊಂಡು ಅವರೊಂದಿಗೆ ಕೆಲಸ ಮಾಡಬೇಕು ಎಂಬುದಾಗಿ ಹೇಳುತ್ತೀರಿ. ಈಗ ಅವರೊಂದಿಗೆ ಚೆನ್ನಾಗಿದ್ದಾರೆ ಎಂಬ ಕಾರಣಕ್ಕೆ ಎಚ್.ಕೆ. ಮಹೇಶ್‌ಗೆ ಅಧ್ಯಕ್ಷ ಸ್ಥಾನದ ಕೊಡುವುದು ಬೇಡ ಎಂಬುದಾಗಿಯೂ ನೀವೇ ಹೇಳುತ್ತೀರಿ ಎಂದು ಟೀಕಿಸಿದರು.
ಯಾರಿಗೂ ಬೇಡ, ಜಿಲ್ಲೆಯಲ್ಲಿ ಹಿಂದಿನಿಂದಲೂ ಕುರುಬ ಸಮಾಜ ಕಾಂಗ್ರೆಸ್ ಬೆಂಬಲಿಸಿಕೊಂಡು ಬಂದಿದೆ. ಆ ಸಮುದಾಯದ ಮುಖಂಡರಾದ ಪಟೇಲ್ ಶಿವಪ್ಪ ಅವರಿಗೆ ಅಧ್ಯಕ್ಷ ಸ್ಥಾನ ಕೊಡಬಹುದಿತ್ತು. ಅಲ್ಪಸಂಖ್ಯಾತರು ಅಥವಾ ಒಕ್ಕಲಿಗ ಸಮುದಾಯದ ಮುಖಂಡರಿಗೆ ನೀಡಬಹುದಿತ್ತು ಎಂದ ಅಸಮಾಧಾನ ಹೊರ ಹಾಕಿದರು.
ಇದುವರೆಗೂ ಸಮರ್ಥ ಅಧ್ಯಕ್ಷರ ನೇಮಿಸಿಲ್ಲ:
ಹಾಸನ ಜಿಲ್ಲಾ ಕಾಂಗ್ರೆಸ್ ಅನ್ನು ಕೆಪಿಸಿಸಿ ಸಂಪೂರ್ಣವಾಗಿ ಕಡೆಗಣಿಸಿದೆ. ಇದುವರೆಗೂ ಒಬ್ಬ ಸಮರ್ಥ ಅಧ್ಯಕ್ಷರನ್ನು ನೇಮಕ ಮಾಡಿಲ್ಲ. ಹಿಂದೆ ಎ. ಮಂಜು ಅವರಿಗೆ ಮಂತ್ರಿ ಸ್ಥಾನ ಕೊಟ್ಟರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಘಟನೆಗೆ ಅನುಕೂಲ ಆಗುತ್ತದೆ ಎಂಬುದಾಗಿ ಮುಖಂಡರೆಲ್ಲಾ ಹೋಗಿ ಹೈಕಮಾಂಡ್‌ಗೆ ಮನವಿ ಸಲ್ಲಿಸಿದರು. ಆದರೆ ಎ.ಮಂಜು ಮಂತ್ರಿ ಆದ ನಂತರ ಪಕ್ಷದ ಸಂಘಟನೆಗೆ ಕಿಂಚಿತ್ತೂ ಗಮನ ಹರಿಸಲಿಲ್ಲ. ಸಾಲದ್ದಕ್ಕೆ ಬಡಪಾಯಿ ವ್ಯಕ್ತಿಯೊಬ್ಬರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಿಸಿ ಪಕ್ಷವನ್ನು ಸಂಪೂರ್ಣ ಮುಳುಗಿಸಿ ಹೋದರು ಎಂದು ಆರೋಪಿಸಿದರು.
ಕಾರ್ಯಕರ್ತರಿಲ್ಲದೆ ನೀವೇನೂ ಮಾಡಲು ಸಾಧ್ಯವಿಲ್ಲ:
ಕಾರ್ಯಕರ್ತರಿದ್ದರೆ ಪಕ್ಷ, ನಾವಿಲ್ಲದೆ ನೀವೇನೂ ಮಾಡಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ, ಸರ್ಕಾರ ರಚಿಸೇ ಬಿಡುತ್ತೇವೆ ಎಂಬ ಭ್ರಮೆಯಲ್ಲಿದ್ದೀರಾ. ಇದೇ ರೀತಿ ಆದರೆ ಅದು ಎಂದಿಗೂ ಸಾಧ್ಯವಿಲ್ಲ. ಕಾರ್ಯಕರ್ತರಿಗೆ ಬುದ್ಧಿ ಹೇಳಲು ಬರಬೇಡಿ, ನಾಯಕರಾದ ಮೊದಲು ನೀವು ಸರಿಯಾಗಿ ಎಂದು ಬುದ್ಧಿ ಹೇಳಿದರು.
ಬಿ. ಶಿವರಾಮು ವಿರುದ್ಧವೂ ಆಕ್ರೋಶ:
ಒಮ್ಮೆ ಹಾಸನದಲ್ಲಿ, ಮತ್ತೊಮ್ಮೆ ಹೊಳೆನರಸೀಪುರದಲ್ಲಿ, ಇನ್ನೊಮ್ಮೆ ಅರಸೀಕೆರೆಯಲ್ಲಿ ಸೋತು ಈಗ ಬೇಲೂರಿಗೆ ಹೋಗಿರುವ ವ್ಯಕ್ತಿಯ ಮಾತೇಕೆ ಕೇಳುತ್ತೀರಿ, ಒಂದೇ ಕಡೆ ನಿಂತು ಹೋರಾಟ ನಡೆಸುವವರಿಗೆ ಟಿಕೆಟ್ ಕೊಡಿ ಎಂಬುದಾಗಿ ಪರೋಕ್ಷವಾಗಿ ಮಾಜಿ ಸಚಿವ ಬಿ. ಶಿವರಾಮು ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು.
ಮನಕ್ಕೆ ಶರಣಾದ ಕಾರ್ಯಾಧ್ಯಕ್ಷ:
ಕಾರ್ಯಕರ್ತರ ಅಸಮಾಧಾನ ಶಮನ ಮಾಡಲು ಬಂದಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಅವರು ಕಾರ್ಯಕರ್ತರ ಆಕ್ರೋಶ ಕಂಡು ಮೌನಕ್ಕೆ ಶರಣಾದರು. ಕಾರ್ಯಕರ್ತರು ಒಬ್ಬರ ತಪ್ಪಿ ಒಬ್ಬರು ಆಕ್ರೋಶ ಹೊರ ಹಾಕುತಿದ್ದರೆ, ಧ್ರುವನಾರಾಯಣ್ ಅವರು ತಮ್ಮ ಸ್ಮಾರ್ಟ್‌ಫೋನ್ ನೋಡುವುದರಲ್ಲಿ ಮಗ್ನರಾಗಿದ್ದರು.
ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಾಕಾಂಕ್ಷಿಗಳಾದ ಜಿಪಂ ಮಾಜಿ ಸದಸ್ಯ ಪಟೇಲ್ ಶಿವಪ್ಪ, ಮುಖಂಡರಾದ ಬಾಗೂರು ಮಂಜೇಗೌಡ, ವಕೀಲ ದೇವರಾಜೇಗೌಡ, ಬಿ.ಕೆ. ರಂಗಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ಹೈಕಮಾಂಡ್ ಹೇಳಿದರೆ ಸ್ಥಾನ ತೊರೆಯಲು ಸಿದ್ಧ:
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಇತ್ತ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಿಯೋಜಿತ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಇ.ಎಚ್. ಲಕ್ಷ್ಮಣ್ ಅವರು, ಹೈಕಮಾಂಡ್ ಹೇಳಿದರೆ ಅಧ್ಯಕ್ಷ ಸ್ಥಾನ ತೊರೆಯಲು ಸಿದ್ಧ ಎಂದು ಹೇಳಿದರು.
ಹಲವು ದಶಕಗಳಿಂದ ಹಿಂದುಳಿದ ವರ್ಗದವರಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಸಾಮಾಜಿಕ ನ್ಯಾಯದಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷ ಧ್ರುವನಾರಾಯಣ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಕ್ಷದ ಹಾಸನ ಜಿಲ್ಲಾ ಉಸ್ತುವಾರಿ ಡಿ.ಕೆ. ಸುರೇಶ್ ಸೇರಿದಂತೆ ಹಲವು ರಾಜ್ಯ ನಾಯಕರು ತೀರ್ಮಾನ ಕೈಗೊಂಡು ನನ್ನನ್ನು ಆಯ್ಕೆ ಮಾಡಿದ್ದಾರೆ ಎಂದರು.
ಹಾಸನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಸಂಬಂಧ ಕೆಪಿಸಿಸಿಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಈ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದ ಆಕಾಂಕ್ಷಿಗಳು ಸಹ ಹಾಜರಿದ್ದರು. ಅವರ ಒಪ್ಪಿಗೆ ಪಡೆದೇ ನನ್ನನ್ನು ಆಯ್ಕೆ ಮಾಡಲಾಗಿದೆ. ಆದರೆ ಈಗ ಗೊಂದಲ ಸೃಷ್ಟಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.