ಮೈಸೂರು: ರಾಜಕೀಯ ಪಕ್ಷಗಳೊಂದಿಗೆ ರೌಡಿಗಳ ಸಂಬಂಧದ ಕುರಿತು ಮಾತನಾಡಲು ಕಾಂಗ್ರೆಸ್‌ಗೆ ನೈತಿಕತೆಯೇ ಇಲ್ಲ ಎಂದು ಬಿಜೆಪಿ ನಗರ ವಕ್ತಾರ ಎಂ.ಎ. ಮೋಹನ್ ಕಿಡಿಕಾರಿದರು.
ಬಿಜೆಪಿಗೆ ರೌಡಿಗಳ ಸೇರ್ಪಡೆ ಮತ್ತು ರೌಡಿ ಪಡೆಯನ್ನು ಕಟ್ಟುತ್ತಿರುವ ಪಾರ್ಟಿ ಎಂದು ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ಸುಳ್ಳು ಆರೋಪ ಮಾಡಿದ್ದಾರೆ. ನಗರದ ಸಾತಗಳ್ಳಿ ಬಸ್ ನಿಲ್ದಾಣದಲ್ಲಿ ಸೋಮವಾರ ಬಾಕಿ ಉಳಿಸಿಕೊಂಡಿದ್ದ ಬಾಡಿಗೆ ನೀಡುವಂತೆ ನೋಟಿಸ್ ನೀಡಿದ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಕಾಂಗ್ರೆಸ್ ಮುಖಂಡ ಹಾಗೂ ಆತನ ಪತ್ನಿ ಬಹಿರಂಗವಾಗಿಯೇ ಮಚ್ಚು ಹಿಡಿದು ಬೆದರಿಕೆ ಹಾಕಿದ್ದಾರೆ. ಇದು ಕಾಂಗ್ರೆಸ್‌ನ ರೌಡಿಸಂಗೆ ಮತ್ತು ರೌಡಿಗಳ ಸಂಬಂಧಕ್ಕೆ ನಿದರ್ಶನ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕುಟುಕಿದರು.
ಇದನ್ನು ಲಕ್ಷ್ಮಣ್ ಸಮರ್ಥಿಸಿಕೊಳ್ಳುವರೆ? ಬಿಜೆಪಿ ಮೊದಲಿನಿಂದಲೂ ಸಚ್ಚಾರಿತ್ರ್ಯ ಹೊಂದಿದ ವ್ಯಕ್ತಿಗಳನ್ನು ಹೊಂದಿರುವ ಪಕ್ಷ. ಕಾಂಗ್ರೆಸ್‌ನವರಂತೆ ರೌಡಿಗಳನ್ನು ಬೆಳೆಸಿ, ಬೂತ್ ಕ್ಯಾಪ್ಚರ್, ಚುನಾವಣೆ ವೇಳೆ ದಬ್ಬಾಳಿಕೆ, ಹೆದರಿಸುವುದು, ರೋಲ್‌ಕಾಲ್ ಇವೆಲ್ಲವೂ ಕಾಂಗ್ರೆಸ್‌ನ ಮೂಲ ನಡವಳಿಕೆಗೆ ಸೇರಿದೆ ಎಂದು ಟೀಕಿಸಿದರು.
ಈ ಪ್ರಕರಣ ನರಸಿಂಹರಾಜ ಕ್ಷೇತ್ರದ ಜನರು ಭಯಭೀತರಾಗುವಂತೆ ಮಾಡಿದೆ. ಇದು ನಡೆಯುವಾಗ ಸ್ಥಳದಲ್ಲೇ ಇದ್ದ ಪೊಲೀಸರು ನಿಷ್ಕ್ರಿಯವಾಗಿ ನಿಂತಿದ್ದು, ಜನರಲ್ಲಿ ಅನುಮಾನ ಮೂಡುವಂತೆ ಮಾಡಿದೆ. ಪೊಲೀಸರಿಗೆ ಸ್ಥಳೀಯ ಶಾಸಕರ ಭಯ ಇದ್ದಂತಿದೆ ಎಂದು ದೂರಿದರು.
ಈ ಪ್ರಕರಣವನ್ನು ಮುಖ್ಯಮಂತ್ರಿ ಮತ್ತು ಗೃಹಸಚಿವರ ಗಮನಕ್ಕೆ ತರಲಾಗಿದೆ. ಜತೆಗೆ, ಈ ಕೂಡಲೇ ಪ್ರಕರಣಕ್ಕೆ ಸಂಬಂಧಿಸಿದವರ ವಿರುದ್ಧ ಕ್ರಮವನ್ನು ಪೊಲೀಸರು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.