ಜಿಲ್ಲೆ

ಕಾಂಗ್ರೆಸ್‌ಗೆ ಜೆಡಿಎಸ್ ಪ್ರಮುಖ ಎದುರಾಳಿಯಾಗಿದೆ: ವಿಜಯ ವಸಂತ್

ಹಾಸನ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲಿರುವ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಐತಿಹಾಸಿಕ ಜಯ ದಾಖಲಿಸಲಿದೆ ಎಂದು ಎಐಸಿಸಿ ವೀಕ್ಷಕ, ತಮಿಳುನಾಡು ರಾಜ್ಯದ ಕನ್ಯಾಕುಮಾರಿ ಲೋಕಸಭಾ ಕ್ಷೇತ್ರದ ಸದಸ್ಯ ವಿಜಯ ವಸಂತ್ ವಿಶ್ವಾಸ ವ್ಯಕ್ತಪಡಿಸಿದರು.


ಹಾಸನ ಲೋಕಸಭಾ ಕ್ಷೇತ್ರದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ, ಸ್ಥಳೀಯ ಮುಖಂಡರೊಂದಿಗೆ ಸಭೆ ನಡೆಸಿದ್ದೇನೆ. ಮತದಾರರೊಂದಿಗೆ ನೇರ ಮುಖಾಮುಖಿ ಆಗಿ ಅವರ ನಾಡಿಮಿಡಿತ ಅರ್ಥ ಮಾಡಿಕೊಂಡಿದ್ದೇನೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಬೇಕು ಎನ್ನುವ ಭಾವನೆ ಮತದಾರರಲ್ಲಿದೆ. ಆದ್ದರಿಂದ ಜಿಲ್ಲೆಯಲ್ಲೂ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗಳಿಸುವುದರಲ್ಲಿ ಅನುಮಾನ ಇಲ್ಲ ಎಂದು ಗುರುವಾರ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಅಭಿಪ್ರಾಯ ಹಂಚಿಕೊಂಡರು.


ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ರಾಜ್ಯದಲ್ಲಿ ನಡೆಸುತ್ತಿರುವ ಸತತ ಪ್ರವಾಸ ಕಾರ್ಯಕ್ರಮಗಳಿಂದ ಕಾಂಗ್ರೆಸ್‌ಗೆ ಯಾವುದೇ ಧಕ್ಕೆ ಇಲ್ಲ. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ಭ್ರಷ್ಟಾಚಾರದಿಂದ ಬೇಸತ್ತಿರುವ ಜನ ಕಾಂಗ್ರೆಸ್ ಅಧಿಕಾರಕ್ಕೆ ಬರುವುದನ್ನು ಎದುರು ನೋಡುತ್ತಿದ್ದಾರೆ. ಅವರ ಮನೋನಿರ್ಧಾರವನ್ನು ಬದಲಿಸಲು ಮೋದಿ ಅಥವಾ ಶಾ ಅವರಿಂದ ಸಾಧ್ಯವಿಲ್ಲ ಎಂದು ನುಡಿದರು.


ಒಂದು ಕುಟುಂಬದೊಳಗೆ ಸದಸ್ಯರ ನಡುವೆ ಅಭಿಪ್ರಾಯ ಭೇದ ಇದ್ದೇ ಇರುತ್ತದೆ. ಅದೇ ರೀತಿ ಜಿಲ್ಲಾ ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ನಡುವೆ ಪೈಪೋಟಿ ಕಾಣಿಸುತ್ತಿದೆ. ಅದು ಗುಂಪುಗಾರಿಕೆ ಅಲ್ಲ. ಈ ಮಾಸಾಂತ್ಯದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದ್ದು, ನಂತರ ಟಿಕೆಟ್ ದೊರೆಯದ ಆಕಾಂಕ್ಷಿಗಳೂ ಒಗ್ಗೂಡಿ ಅಭ್ಯರ್ಥಿ ಪರವಾಗಿ ಕೆಲಸ ಮಾಡಲಿದ್ದಾರೆ. ಎಲ್ಲರೊಂದಿಗೂ ನಾವು ಮಾತನಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.


ಹಾಸನ ಜಿಲ್ಲೆಯ ಜನ ಸ್ನೇಹಪರ ವ್ಯಕ್ತಿತ್ವ ಹೊಂದಿದ್ದಾರೆ. ಶ್ರಮಿಕರು ಸೇರಿದಂತೆ ಎಲ್ಲ ವರ್ಗದ ಜನ ಇಲ್ಲಿದ್ದಾರೆ. ಇಲ್ಲಿ ಕಾಂಗ್ರೆಸ್‌ಗೆ ಜೆಡಿಎಸ್ ಪ್ರಮುಖ ಎದುರಾಳಿಯಾಗಿದೆ. ಈ ಬಾರಿ ಜಿಲ್ಲೆಯ ಮತದಾರರು ಬದಲಾವಣೆ ಬಯಸಿದ್ದು, ಕಾಂಗ್ರೆಸ್‌ನತ್ತ ವಾಲಿದ್ದಾರೆ ಎಂದರು.


ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವ ಜತೆಗೆ ಪಕ್ಷದ ವತಿಯಿಂದ ಸಮೀಕ್ಷೆಯನ್ನೂ ಮಾಡಲಾಗಿದೆ. ಈ ಸಂಬಂಧ ಶೀಘ್ರದಲ್ಲಿಯೇ ಹೈಕಮಾಂಡ್‌ಗೆ ವರದಿ ಸಲ್ಲಿಸಲಾಗುವುದು. ಆ ವರದಿಯನ್ನಾಧರಿಸಿ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ನಡೆಯಲಿದೆ ಎಂದು ತಿಳಿಸಿದರು.


ಹಾಸನ ಲೋಕಸಭಾ ಕ್ಷೇತ್ರದ ಚುನಾವಣಾ ಪೂರ್ವಸಿದ್ಧತೆ ಜವಾಬ್ದಾರಿಯನ್ನು ಪಕ್ಷ ತಮಗೆ ನೀಡಿದ್ದು, ಒಂದು ವಾರ ಕಾಲ ಜಿಲ್ಲೆಯಲ್ಲಿ ಸಂಚರಿಸಿ ಸಮೀಕ್ಷೆ ನಡೆಸಲಾಗುವುದು. ಹಾಸನ ಜಿಲ್ಲೆ ಜೆಡಿಎಸ್ ಭದ್ರಕೋಟೆ ಎಂಬುದಾಗಿ ಬಿಂಬಿತವಾಗಿದೆ. ಅದು ಸುಳ್ಳು, ಕಾಂಗ್ರೆಸ್‌ಗೆ ಉತ್ತಮ ವಾತಾವರಣ ಇದೆ ಎಂದು ಹೇಳಿದರು.


ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಇ.ಎಚ್. ಲಕ್ಷ್ಮಣ್, ಜಿಲ್ಲಾ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ, ವೀಕ್ಷಕರ ತಂಡದ ಸದಸ್ಯರಾದ ಅನಿಲ್ ಕುಮಾರ್, ಚಾರ್ಲ್ಸ್ ಮತ್ತು ರಾಮಸ್ವಾಮಿ ಸುದ್ದಿಗೋಷ್ಠಿಯಲ್ಲಿದ್ದರು.