ಜಿಲ್ಲೆ

ಕಾಂಗ್ರೆಸ್‌ಗೆ ಗುಂಪುಗಾರಿಕೆ ಕಂಟಕ!?

ಹಾಸನ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟ ಕಾಲ ಶುರುವಾದಂತಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಇತ್ತೀಚೆಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಜಿಪಂ ಮಾಜಿ ಸದಸ್ಯ ಇ.ಎಚ್. ಲಕ್ಷ್ಮಣ್ ಅವರನ್ನು ನೇಮಕ ಮಾಡಿರುವುದರ ವಿರುದ್ಧ ಕಾರ್ಯಕರ್ತರ ಅಸಮಧಾನ ಬುಗಿಲೆದ್ದಿದ್ದು, ಎರಡು ದಿನಗಳ ಹಿಂದೆ ಖಾಸಗಿ ಹೋಟೆಲೊಂದರಲ್ಲಿ ಸಭೆ ನಡೆಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರೇ ಪ್ರತಿಭಟನೆ ನಡೆಸಿದರು.

ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಭಿನ್ನಮತ ಮತ್ತು ಗುಂಪುಗಾರಿಕೆ ಹೊಸದೇನಲ್ಲ, ಅದಕ್ಕೆ ಸುಧೀಘ ಇತಿಹಾಸ ಇದೆ. ಈ ಕಾರಣಕ್ಕೆ ‘ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್‌ನವರನ್ನು ಸೋಲಿಸಲು ಬೇರೆ ಯಾರೂ ಬೇಕಿಲ್ಲ, ಅವರೇ ಸೊಲಿಸಿಕೊಳ್ಳುತ್ತಾರೆ’ ಎಂಬ ಆಡುಮಾತು ಹುಟ್ಟಿಕೊಂಡಿದೆ.

ಹಿಂದೆ ಎಚ್.ಸಿ. ಶ್ರೀಕಂಠಯ್ಯ ಮತ್ತು ಜಿ.ಪುಟ್ಟಸ್ವಾಮಿಗೌಡರ ಕಾಲದಲ್ಲೂ ಕಾಂಗ್ರೆಸ್‌ನಲ್ಲಿ ಎರಡು ಗುಂಪುಗಳಿದ್ದವು. ಇವರಿಬ್ಬರು ಸಂಬಂಧದಲ್ಲಿ ಬೀಗರಾಗಿದ್ದರು ಮತ್ತು ಒಂದೇ ಪಕ್ಷದಲ್ಲಿದ್ದರು ಸಹ ಪರಸ್ಪರ ಕಿತ್ತಾಡಿಕೊಂಡು ತಮ್ಮದೇ ಆದ ಕಾರ್ಯಕರ್ತರ ಗುಂಪುಗಳನ್ನು ಕಟ್ಟಿಕೊಂಡಿದ್ದರು. 1999 ರಲ್ಲಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಎಚ್.ಸಿ. ಶ್ರೀಕಂಠಯ್ಯ ಕಂದಾಯ ಸಚಿವರಾಗಿದ್ದರು. ಸಹಜವಾಗಿ ಹಾಸನ ಜಿಲ್ಲಾ ಉಸ್ತುವಾರಿಯೂ ಅವರದೇ ಆಗಿತ್ತು. ಆಗ ಜಿ. ಪುಟ್ಟಸ್ವಾಮಿಗೌಡರು ಸಂಸದರಾಗಿದ್ದರು. ಆದರೆ ನಿತ್ಯ ಇವರಿಬ್ಬರ ಜಗಳ ಆಗ ರಾಜ್ಯ ಮಟ್ಟದ ಸುದ್ದಿ ಆಗುತ್ತಿತ್ತು. ಜಿ. ಪುಟ್ಟಸ್ವಾಮಿಗೌಡರು ಬಹಿರಂಗವಾಗಿಯೇ ಎಚ್.ಸಿ. ಶ್ರೀಕಂಠಯ್ಯನವರ ವಿರುದ್ಧ ಹೇಳಿಕೆ ನೀಡುತ್ತಿದ್ದರು. ಆದರೆ ಎಚ್.ಸಿ. ಶ್ರೀಕಂಠಯ್ಯನವರು ಪ್ರತಿ ಟೀಕೆ ಮಾಡದಿದ್ದರೂ ‘ನಮ್ಮಿಬ್ಬರಲ್ಲಿ ಒಬ್ಬರು ಸಾಯುವವರೆಗೂ ಇದು ಇದ್ದದ್ದೇ ಬಿಡಿ’ ಎಂಬುದಾಗಿ ಬೇಸರ ಹೊರ ಹಾಕುತ್ತಿದ್ದರು. ಈಗ ಅವರಿಬ್ಬರೂ ಇಲ್ಲ. ಆದರೆ ಗುಂಪುಗಾರಿಕೆ ಕೊನೆಯಾಗಿಲ್ಲ.

ಬಿ. ಶಿವರಾಮು ವರ್ಸಸ್ ಎ. ಮಂಜು:
ಎಚ್.ಸಿ. ಶ್ರೀಕಂಠಯ್ಯ ಮತ್ತು ಜಿ. ಪುಟ್ಟಸ್ವಾಮಿಗೌಡರು ಕಾಲವಾದ ನಂತರ ಮಾಜಿ ಸಚಿವ ಬಿ. ಶಿವರಾಮು ಮತ್ತು ಎ. ಮಂಜು ನೇತೃತ್ವದ ಎರಡು ಗುಂಪುಗಳು ಸೃಷ್ಟಿಯಾಗಿ ಜಿಲ್ಲಾ ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಮುಂದುವರಿಯಿತು. ಈ ಗುಂಪುಗಳಿಗೆ ರಾಜ್ಯ ಮಟ್ಟದ ನಾಯಕರ ಪೋಷಣೆಯೂ ಸಿಕ್ಕಿದ್ದರಿಂದ ಗುಂಪುಗಾರಿಕೆ ಸಮಸ್ಯೆ ದೊಡ್ಡದಾಗಿ ಬೆಳೆಯಿತು. ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೃಪೆ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ಅವರ ಮೇಲಿದ್ದರೆ, ಡಿ.ಕೆ. ಶಿವಕುಮಾರ್ ಬಂಬಲ ಬಿ. ಶಿವರಾಮು ಪರವಾಗಿತ್ತು. ಆಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಎ. ಮಂಜು ಅವರು ತಮ್ಮ ಬೆಂಬಲಿಗ ಜಾವಗಲ್ ಮಂಜುನಾಥ್ ಅವರನ್ನು ನೇಮಕ ಮಾಡಿಸಿಕೊಂಡಿದ್ದರು.

ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಎ. ಮಂಜು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ನಂತರ ಜಿಲ್ಲಾ ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಚಟುವಟಿಕೆಗಳು ತಣ್ಣಗಾಗಿದ್ದವು. ಇತ್ತೀಚೆಗೆ ಎ. ಮಂಜು ಬಿಜೆಪಿಯನ್ನೂ ತೊರೆದು ಅರಕಲಗೂಡು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲೇ ಮತ್ತೆ ಗುಂಪುಗಾರಿಕೆ ಚಟುವಟಿಕೆಗಳು ಗರಿಗೆದರಿರುವುದು ಕುತೂಹಲಕರ ಬೆಳವಣಿಗೆಯಾಗಿದೆ.

ಬಿ. ಶಿವರಾಮು ವಿರುದ್ಧ ಆಕ್ರೋಶ:
ಏಳು ತಿಂಗಳ ಹಿಂದೆ ಭಾರತೀಯ ಜನತಾ ಪಕ್ಷ ತೊರೆದು ಕಾಂಗ್ರೆಸ್ ಸೇರಿರುವ ಬೇಲೂರು ತಾಲೂಕಿನ ಜಿಪಂ ಮಾಜಿ ಸದಸ್ಯ ಇ.ಎಚ್. ಲಕ್ಷ್ಮಣ್ ಅವರನ್ನು ಜಿಲ್ಲಾ ಕಾಂಗ್ರೆಸ್‌ನ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದಕ್ಕೆ ಮಾಜಿ ಸಚಿವ ಬಿ. ಶಿವರಾಮು ವಿರುದ್ಧ ಕೆಲ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬೇಲೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಆಗಿರುವ ಬಿ. ಶಿವರಾಮು ಅವರು ತಮಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮೇಲೆ ಒತ್ತಡ ಹೇರಿ ಈ ನೇಮಕ ಮಾಡಿಸಿದ್ದಾರೆ ಎಂಬುದು ವಿರೋಧಿಗಳ ಆರೋಪವಾಗಿದೆ.

ಎರಡು ದಿನಗಳ ಹಿಂದೆ ನಗರದ ಖಾಸಗಿ ಹೋಟೆಲೊಂದರಲ್ಲಿ ಸಭೆ ನಡೆಸಿದ ನಗರಸಭೆ ಮಾಜಿ ಸದಸ್ಯ ಚಂದು ಮತ್ತಿತರ ಕಾಂಗ್ರೆಸ್ ಕಾರ್ಯಕರ್ತರು, ‘ನಮ್ಮ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮಾತೆತ್ತಿದ್ದರೆ ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸುತ್ತಾರೆ. ಆದರೆ ಆರ್‌ಎಸ್‌ಎಸ್ ಹಿನ್ನೆಲೆಯ ವ್ಯಕ್ತಿಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿದ್ದಾರೆ’ ಎಂಬುದಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಬುಧವಾರ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಶಾಮಿಯಾನ ಹಾಕಿಕೊಂಡು ಪ್ರತಿಭಟನೆ ಸಹ ನಡೆಸಿದರು. ಆದರೆ ಹೈಕಮಾಂಡ್‌ನಿಂದ ಎಚ್ಚರಿಕೆ ಸಂದೇಶ ರವಾನೆ ಆದ ಕಾರಣ ಹತ್ತೇ ನಿಮಿಷದಲ್ಲಿ ಪ್ರತಿಭಟನೆ ಅಂತ್ಯಗೊಂಡಿತು.

ಹಲವು ಆಕಾಂಕ್ಷಿಗಳಿದ್ದರು:
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ, ಜಿಪಂ ಮಾಜಿ ಸದಸ್ಯ ಪಟೇಲ್ ಶಿವಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ, ಎಚ್.ಕೆ. ಮಹೇಶ್, ವಕೀಲ ದೇವರಾಜೇಗೌಡ ಮತ್ತಿತರರು ಆಕಾಂಕ್ಷಿಗಳಿದ್ದರು. ಕುರುಬ ಸಮುದಾಯಕ್ಕೆ ಆದ್ಯತೆ ನೀಡುವ ದೃಷ್ಟಿಯಿಂದ ಪಟೇಲ್ ಶಿವಪ್ಪ ಅವರಿಗೆ ಅಧ್ಯಕ್ಷ ಸ್ಥಾನ ಸಿಗಬಹುದು ಎಂಬ ಬಹುತೇಕ ಕಾಂಗ್ರೆಸ್ ಕಾರ್ಯಕರ್ತರ ನಿರೀಕ್ಷೆ ಹುಸಿಯಾಗಿದೆ ಎನ್ನಲಾಗಿದೆ.

‘‘ಹಿಂದುಳಿದ ವರ್ಗಗಳಿಗೆ ಆದ್ಯತೆ ನೀಡುವುದಾದರೆ ನನಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಕೊಡಿ, ಒಕ್ಕಲಿಗರಿಗೆ ನೀಡುವುದಾದರೆ ಎಂ.ಎ. ಗೋಪಾಲಸ್ವಾಮಿ, ಎಚ್.ಕೆ. ಮಹೇಶ್ ಅಥವಾ ವಕೀಲ ದೇವರಾಜೇಗೌಡ ಯಾರಿಗಾದರೂ ಅವಕಾಶ ನೀಡಿ ಎಂಬುದಾಗಿ ಪಕ್ಷದ ಹೈಕಮಾಂಡ್‌ಗೆ ಮನವಿ ಮಾಡಿದ್ದೆ. ಕಾಂಗ್ರೆಸ್‌ನಲ್ಲಿ ಹಲವಾರು ವರ್ಷಗಳ ಕಾಲ ದುಡಿದವರನ್ನು ಬಿಟ್ಟು ಹೊಸಬರಿಗೆ ಮಣೆ ಹಾಕಿರುವುದಕ್ಕೆ ಸಹಜವಾಗೇ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ. ಗೊಂದಲ ನಿವಾರಿಸಬೇಕಾದುದು ಹೈಕಮಾಂಡ್ ಹೊಣೆ.’’
  • ಪಟೇಲ್ ಶಿವಪ್ಪ, ಜಿಪಂ ಮಾಜಿ ಸದಸ್ಯ.
‘‘ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇಮಕದಲ್ಲಿ ನನ್ನ ಪಾತ್ರ ಇಲ್ಲ, ರಾಜ್ಯ ನಾಯಕರು ಎಲ್ಲರನ್ನೂ ಕೇಳಿದಂತೆ ಇ.ಎಚ್. ಲಕ್ಷ್ಮಣ್ ನೇಮಕ ಕುರಿತಂತೆ ನನ್ನ ಅಭಿಪ್ರಾಯವನ್ನೂ ಕೇಳಿದರು. ನಾನು ಆಗಬಹುದು ಎಂದು ಹೇಳಿದ್ದೆ. ಅಷ್ಟು ಬಿಟ್ಟರೆ ನಾನು ಯಾರ ಪರವಾಗಿಯೂ ಒತ್ತಡ ಹೇರುವ ಕೆಲಸ ಮಾಡಿಲ್ಲ.’’
  • ಬಿ. ಶಿವರಾಮು, ಮಾಜಿ ಸಚಿವ.
‘‘ರಾಜ್ಯ ನಾಯಕರು ಸಮೀಕ್ಷೆ ನಡೆಸಿಯೇ ನನಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಇದರಲ್ಲಿ ಯಾರ ಪಾತ್ರವೂ ಇಲ್ಲ. ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಮತದಾರರ ಸಂಖ್ಯೆ ಗಣನೀಯವಾಗಿದೆ. ಆದ್ದರಿಂದ ಆ ವರ್ಗಕ್ಕೆ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ಮತ್ತು ನನ್ನ ಸಂಘಟನಾ ಸಾಮರ್ಥ್ಯ ಗುರುತಿಸಿ ಅವಕಾಶ ನೀಡಲಾಗಿದೆ.’’
  • ಇ.ಎಚ್. ಲಕ್ಷ್ಮಣ್, ನಿಯೋಜಿತ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ.