ಜಿಲ್ಲೆ

ಕಾಂಗ್ರೆಸ್‌ಗೆ ಒಡೆಯುವುದೇ ಅಭ್ಯಾಸ: ಡಿ.ಕೆ. ಸುರೇಶ್ ಹೇಳಿಕೆಗೆ ಸಿ.ಟಿ. ರವಿ ತಿರುಗೇಟು

ಹಾಸನ: ಒಡೆದು ಆಳುವ ರಾಜಕಾರಣವನ್ನೇ ಮಾಡಿಕೊಂಡು ಬಂದಿರುವ ಕಾಂಗ್ರೆಸ್‌ಗೆ ಒಟ್ಟುಗೂಡಿಸಿ ಅಭ್ಯಾಸವೇ ಇಲ್ಲ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳುವ ಮೂಲಕ ದಕ್ಷಿಣ ಭಾರತ ಪ್ರತ್ಯೇಕ ರಾಷ್ಟ್ರ ಆಗಬೇಕು ಎಂಬ ಸಂಸದ ಡಿ.ಕೆ. ಸುರೇಶ್ ಹೇಳಿಕೆಗೆ ತಿರುಗೇಟು ನೀಡಿದರು.
ಹಾಸನದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್‌ಗಾಂಧಿ ಅವರ ಯಾತ್ರೆಗೆ ‘ಭಾರತ್ ತೋಡೊ ಯಾತ್ರೆ’ ಅಂತ ಇಟ್ಟಿದ್ದರೆ ಡಿ.ಕೆ.ಸುರೇಶ್ ಅವರ ಹೇಳಿಕೆಗಳಿಗೆ ತಾತ್ವಿಕವಾದ ಬಲ ಬರುತ್ತಿತ್ತು. ‘ಜೋಡೊ’ ಅಂತ ಹೇಳುವ ಇವರು ಈಗ ದೇಶ ಒಡೆಯುವ ಮಾತು ಆಡುತ್ತಾರೆ ಎಂದು ಟೀಕಿಸಿದರು.
ರಾಷ್ಟ್ರ ಒಡೆಯುವ ಮಾತನ್ನು ಡಿ.ಕೆ.ಸುರೇಶ್ ಹೇಳಿದರೆ, ಜಾತಿ- ಜಾತಿ ನಡುವೆ ಒಡೆಯುವ ರಾಜಕಾರಣವನ್ನು ಸಿದ್ದರಾಮಯ್ಯ ಆದಿಯಾಗಿ ಮಾಡಿಕೊಂಡು ಬಂದಿದ್ದಾರೆ. ಸಿದ್ದರಾಮಯ್ಯ ಅವರು ಅಪರೂಪಕ್ಕೊಮ್ಮೆ ಮನುಷ್ಯತ್ವ ಇರಬೇಕು ಅಂತಾರೆ. ಆದರೆ ಮಾಡುವುದೆಲ್ಲಾ ಜಾತಿ ರಾಜಕಾರಣ ಎಂದು ವಾಗ್ದಾಳಿ ನಡೆಸಿದರು.
ಬಡವರು ಎಲ್ಲಾ ಜಾತಿಯಲ್ಲೂ ಇದ್ದಾರೆ. ಯಾಕೆ ಅವರು ಬಡವರ ಪರ ಯೋಚನೆ ಮಾಡಲ್ಲ. ಬಡವರ ಪರವಾಗಿ ಏಕೆ ಮಾತನಾಡಲ್ಲ? ಜಾತಿಯನ್ನೇ ಇಟ್ಟುಕೊಂಡು ಏಕೆ ಮಾತಾನಾಡುತ್ತಾರೆ? ಎಂದು ಪ್ರಶ್ನಿಸಿದರು. ಎಲ್ಲಾ ಜಾತಿಯಲ್ಲೂ ಒಳ್ಳೆಯವರೂ ಇದ್ದಾರೆ, ಕೆಟ್ಟವರೂ ಇದ್ದಾರೆ. ಹಾಗಾದರೆ ಜಾತಿ ದ್ವೇಷ ಯಾಕೆ ಇವರಿಗೆ? ಜಾತಿ ದ್ವೇಷ, ಜಾತಿ ಒಡೆದು ರಾಜಕಾರಣ ಮಾಡುವುದು, ಭಾಷೆ ಹೆಸರಿನಲ್ಲಿ ರಾಜಕಾರಣ ಮಾಡುವುದು ಕಾಂಗ್ರೆಸ್ ಸಂಸ್ಕೃತಿ. ಆ ಸಂಸ್ಕೃತಿಯನ್ನೇ ಡಿ.ಕೆ.ಸುರೇಶ್ ಹೇಳಿದ್ದಾರೆ ಎಂದರು.
ಸಂಕುಚಿತ ಮನೋಭಾವ ಇರುವವರು ಎಲ್ಲದರಲ್ಲೂ ತಪ್ಪು ಹುಡುಕುತ್ತಾರೆ. ದೇಶ ಒಡೆಯುತ್ತಿವೆ ಅಂತ ಹೊರಟ ಜಿನ್ನಾಗೆ ಇವರು ಬೆಂಬಲ ಕೊಟ್ಟರು. ಅದಾದ ನಂತರ ಸರ್ದಾರ್ ಪಟೇಲ್ ದೇಶವನ್ನು ಒಗ್ಗೂಡಿಸಿದರು. ಹೈದರಾಬಾದ್ ನಿಜಾಮರ ಮನಸ್ಥಿತಿಯವರಂತೆ ಡಿ.ಕೆ.ಸುರೇಶ್, ಡಿ.ಕೆ.ಶಿವಕುಮಾರ್ ವರ್ತಿಸಬಾರದು ಎಂದು ಹೇಳಿದರು.
ಫೆ.7 ರಂದು ದೆಹಲಿಯಲ್ಲಿ ಕಾಂಗ್ರೆಸ್ಸಿಗರು ಪ್ರತಿಭಟನೆ ಮಾಡಲಿ, ಪ್ರತಿಭಟನೆ ಮಾಡಲು ಎಲ್ಲರಿಗೂ ಪ್ರಜಾಪ್ರಭುತ್ವದಲ್ಲಿ ಹಕ್ಕಿದೆ. ಅಂಕಿ-ಅಂಶಗಳನ್ನು ಮುಂದಿಟ್ಟು ಜನರಿಗೆ ಮನವರಿಕೆ ಮಾಡಿಕೊಡುತ್ತೇವೆ. ಅವರು ಹೇಳುವುದರಲ್ಲಿ ಎಷ್ಟು ಸತ್ಯ ಇದೆ, ಎಷ್ಟು ಸುಳ್ಳು ಇದೆ ಎಂಬುದನ್ನು ಜನರ ಮುಂದೆ ಇಡುತ್ತೇವೆ. ಇಲ್ಲಿ ಪ್ರತಿಭಟನೆ ಮಾಡಲು ಹಕ್ಕಿದೆ ದೇಶ ಒಡೆಯಲು ಹಕ್ಕಿಲ್ಲ ಎಂದರು.