ಜಿಲ್ಲೆ

ಕಾಂಗ್ರೆಸ್ ಹೋರಾಟಕ್ಕೆ ಬಿಜೆಪಿ ನೊಂದುಕೊಳ್ಳುವುದೇಕೆ?

ಎಸ್.ಎನ್.ರವೀಂದ್ರ

ಮೂಡಿಗೆರೆ: ದೇಶದಲ್ಲಿ ಮತ ಕಳವಾಗಿರುವ ಬಗ್ಗೆ ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್ ಆರೋಪ ಮಾಡಿದರೆ ಬಿಜೆಪಿಯವರು ನೊಂದುಕೊಳ್ಳುತ್ತಾರೆ. ಬಿಜೆಪಿಯವರು ಚುನಾವಣಾ ಆಯೋಗದ ವಕ್ತಾರರಂತೆ ವರ್ತಿಸುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ.ಎಸ್.ಅನಂತ್ ದೂರಿದ್ದಾರೆ.

ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಕುರಿತು ಎಂಎಲ್ಸಿ ಸಿ.ಟಿ.ರವಿ ಬೇಕಾಬಿಟ್ಟಿಯಾಗಿ ಮಾತನಾಡುತ್ತಿದ್ದಾರೆ. ರಾಹುಲ್ ಗಾಂಧಿ ಅವರ ವಿರುದ್ಧ ಮಾತನಾಡುವ ನೈತಿಕತೆ ಸಿ.ಟಿ.ರವಿ ಅವರಿಗೆ ಇಲ್ಲ. ಬಿಜೆಪಿಯವರಿಂದ ಚುನಾವಣಾ ವ್ಯವಸ್ಥೆ ಬಗ್ಗೆ ಕಾಂಗ್ರೆಸ್ ಪಕ್ಷ ಪಾಠ ಕಲಿಯುವ ಅಗತ್ಯವಿಲ್ಲ. ದೇಶಕ್ಕೆ ಮಾದರಿ ಚುನಾವಣಾ ವ್ಯವಸ್ಥೆಯನ್ನು ಜಾರಿಗೆ ತಂದಿರುವುದು ಕಾಂಗ್ರೆಸ್ ಎಂಬುದನ್ನು ಬಿಜೆಪಿಯವರು ತಿಳಿದುಕೊಳ್ಳಬೇಕು. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನಾಯಕರು ಚುನಾವಣಾ ಆಯೋಗದ ಸಹಕಾರದಿಂದ ನಕಲಿ ಮತದಾರರನ್ನು ಸೃಷ್ಟಿಸಿ ಮತದಾನ ಮಾಡಿರುವ ಬಗ್ಗೆ ರಾಹುಲ್ ಗಾಂಧಿ ದಾಖಲೆ ಸಮೇತ ಸಾಕ್ಷ್ಯ ನೀಡಿದ್ದಾರೆ. ಇದುವರೆಗೂ ಚುನಾವಣೆಯಲ್ಲಿ ಅಕ್ರಮ ನಡೆಸಿ ವಾಮ ಮಾರ್ಗದ ಮೂಲಕ ಅಧಿಕಾರಕ್ಕೆ ಬಿಜೆಪಿ ಬಂದಿರುವುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಆರೋಪಿಸಿದ್ದಾರೆ.

ನಕಲಿ ಮತದಾರರನ್ನು ಸೃಷ್ಟಿಸಿರುವ ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್ ದೇಶಾದ್ಯಂತ ಚಳವಳಿ ಆರಂಭಿಸಿದೆ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುವ ಪರಿಸ್ಥಿತಿ ಬಿಜೆಪಿಗೆ ಬಂದಿದೆ. ಬಿಜೆಪಿ ವರ್ತನೆ ನೋಡಿದರೆ ಲೋಕಸಭಾ ಚುನಾವಣೆಯಲ್ಲಿ ಮತ ಕಳ್ಳತನ ಮಾಡಿರುವುದನ್ನು ಅವರು ಒಪ್ಪಿಕೊಂಡಂತೆ ಸ್ಪಷ್ಟವಾಗುತ್ತದೆ. ತಪ್ಪು ಮಾಡಿರುವುದರಿಂದ ಕಾಂಗ್ರೆಸಿನ ಹೋರಾಟವನ್ನು ಬಿಜೆಪಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಬಿಜೆಪಿ ಅಕ್ರಮವೆಸಗಿದೆ ಎಂಬುದು ಸ್ಪಷ್ಟವಾಗುತ್ತಿದೆ. ದೇಶದ ಜನ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.