ಜಿಲ್ಲೆ

ಕಾಂಗ್ರೆಸ್ ಸಿದ್ಧಾಂತಕ್ಕೆ ಜನ ಬೆಂಬಲ

ಹನೂರು: ಕಾಂಗ್ರೆಸ್ ಸಿದ್ಧಾಂತ ಹಾಗೂ ಜನಪರ ಯೋಜನೆಗಳನ್ನು ಮೆಚ್ಚಿ ಮಹಿಳೆಯರು ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಹೆಮ್ಮೆಯ ವಿಷಯ ಎಂದು ಶಾಸಕ ಆರ್.ನರೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದರು.


ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಡವರು, ದೀನ-ದಲಿತರು, ಹಿಂದುಳಿದವರು, ಕೃಷಿಕರು, ಮಹಿಳೆಯರು ಸೇರಿದಂತೆ ಇನ್ನಿತರ ವರ್ಗಕ್ಕೆ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಉತ್ತಮ ಅಡಳಿತ ನೀಡಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಗೊಂಡ ಯೋಜನೆಗಳ ಸದುಪಯೋಗವನ್ನು ಫಲಾನುಭವಿಗಳು ಇಂದಿಗೂ ಸಹ ಪಡೆಯುತ್ತಿದ್ದಾರೆ. ಇದರಿಂದ ಪಕ್ಷದ ಪರ ಜನರಲ್ಲಿ ಉತ್ತಮ ಒಲವಿದ್ದು, ಪಕ್ಷಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದರು.


ಹನೂರು ಕ್ಷೇತ್ರದಲ್ಲೂ ಸಾಕಷ್ಟು ಅಭಿವೃದ್ಧಿಯಾಗಿದೆ. ಕಾರಣಾಂತರದಿಂದ ಇತರ ಪಕ್ಷದ ಮೊರೆ ಹೋಗಿದ್ದ ಕಾಂಗ್ರೆಸ್‌ನ ಕೆಲ ಮೂಲ ಕಾರ್ಯಕರ್ತರು ಮತ್ತೆ ಪಕ್ಷಕ್ಕೆ ಹಿಂತಿರುಗುತ್ತಿದ್ದಾರೆ. ಜತೆಗೆ ಇದೀಗ ಸಿರಗೋಡು ಗ್ರಾಮದ ಮಹಿಳಾ ಸ್ವಸಹಾಯ ಸಂಘದ ಪದಾಧಿಕಾರಿಗಳು ಸೇರ್ಪಡೆಯಾಗಿರುವುದು ಪಕ್ಷಕ್ಕೆ ಮತ್ತಷ್ಟು ಶಕ್ತಿ ಬಂದಂತಾಗಿದೆ ಎಂದರು.


ಈ ವೇಳೆ ಮಹಿಳೆಯರು ಸರ್ಕಾರದಿಂದ ಸವಲತ್ತುಗಳನ್ನು ಒದಗಿಸಿಕೊಡುವಂತೆ ಮನವಿ ಮಾಡಿದರು. ಮುಂದಿನ ದಿನಗಳಲ್ಲಿ ಈ ಬಗ್ಗೆ ಅಗತ್ಯ ಕ್ರಮ ವಹಿಸುವುದಾಗಿ ಶಾಸಕರು ಭರವಸೆ ನೀಡಿದರು.
ಇದಕ್ಕೂ ಮುನ್ನ ಮಹಿಳಾ ಸ್ವಸಹಾಯ ಸಂಘದ ಪದಾಧಿಕಾರಿಗಳಾದ ರಾಜೀಬಾಯಿ, ಸರೋಜಾ, ಸೋನಾಬಾಯಿ, ಲಕ್ಷ್ಮೀ ಕಮಲಾಬಾಯಿ, ಸಂಗೀತಾಬಾಯಿ, ಜ್ಯೋತಿಬಾಯಿ, ಮಾದೇವಿ, ಸವಿತಾಬಾಯಿ, ಲಕ್ಷ್ಮೀಬಾಯಿ, ಪಾರ್ವತಿ ಹಾಗೂ ಇನ್ನಿತರರು ಶಾಸಕ ಆರ್.ನರೇಂದ್ರ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು.


ಪಪಂ ಉಪಾಧ್ಯಕ್ಷ ಗಿರೀಶ್, ಸದಸ್ಯರಾದ ಹರೀಶ್‌ಕುಮಾರ್, ಸೋಮಶೇಖರ್, ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಮಾದೇಶ್, ಮಂಜೇಶ್, ಮುಖಂಡರಾದ ಚಿಕ್ಕತಮ್ಮಯ್ಯ, ವೆಂಕಟರಮಣನಾಯ್ಡು, ಉದ್ದನೂರು ಸಿದ್ದರಾಜು, ಪಿಯ್ಯಪ್ಪ, ನಟರಾಜು ಇತರರು ಇದ್ದರು.