ಹನೂರು: ಕಾಂಗ್ರೆಸ್ ಸಿದ್ಧಾಂತ ಹಾಗೂ ಕ್ಷೇತ್ರದಲ್ಲಾಗಿರುವ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಇತರ ಪಕ್ಷದ ಪ್ರಭಾವಿ ಮುಖಂಡರು ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿರುವುದು ಗೆಲುವಿನ ದಿಕ್ಸೂಚಿಯಾಗಿದೆ ಎಂದು ಶಾಸಕ ಆರ್.ನರೇಂದ್ರ ತಿಳಿಸಿದರು.
ಕೊಳ್ಳೇಗಾಲದ ತಮ್ಮ ನಿವಾಸದಲ್ಲಿ ಸೋಮವಾರ ಆಯೋಜಿಸಿದ್ದ ಉಪ್ಪಾರ ಸಮುದಾಯದ ಮುಖಂಡ ಜೆಡಿಎಸ್‌ನ ಕಾಮರಾಜು ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಉತ್ತಮ ಆಡಳಿತ ನೀಡುವ ಮೂಲಕ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದು, ಜನಮನ್ನಣೆ ಗಳಿಸಿದೆ. ಹನೂರು ಕ್ಷೇತ್ರದಲ್ಲಿ ಮೂರೂವರೆ ಸಾವಿರ ಕೋಟಿ ರೂ. ಅನುದಾನದಲ್ಲಿ ರಸ್ತೆ ಅಭಿವೃದ್ಧಿ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಕೆರೆಗಳಿಗೆ ನೀರು ತುಂಬಿಸುವ ಯೋಜನೆ, 213 ಭವನಗಳ ನಿರ್ಮಾಣ, ವಸತಿ ಶಾಲೆಗಳ ಸ್ಥಾಪನೆ, ಬಸ್ ನಿಲ್ದಾಣ, ಸೇತುವೆಗಳ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಈ ಬಗ್ಗೆ ಜನರಿಗೆ ಮನದಟ್ಟಾಗಿದೆ. ಕಳೆದ ಬಾರಿ ಶೇ.98ರಷ್ಟು ಭರವಸೆಗಳನ್ನು ಈಡೇರಿಸಿರುವುದರಿಂದ ಕಾಂಗ್ರೆಸ್ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿದೆ. ಹಾಗಾಗಿ ಈ ಬಾರಿ ಬಿಜೆಪಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ. ಈ ದಿಸೆಯಲ್ಲಿ ಇತರ ಪಕ್ಷದ ಮುಖಂಡರು ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿರುವುದು ಪಕ್ಷಕ್ಕೆ ಇನ್ನಷು ಶಕ್ತಿ ಬಂದಂತಾಗಿದೆ ಎಂದು ತಿಳಿಸಿದರು.
ಪಪಂ ಉಪಾಧ್ಯಕ್ಷ ಗಿರೀಶ್, ಚಾಮುಲ್ ನಿರ್ದೇಶಕ ನಂಜುಂಡಸ್ವಾಮಿ, ಪ್ರಚಾರ ಸಮಿತಿ ಅಧ್ಯಕ್ಷ ಶಿವಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ರಂಗಶೆಟ್ಟಿ, ಸದಸ್ಯ ಮಾದೇಗೌಡ, ಮುಖಂಡರಾದ ವಿಷ್ಣುಕುಮಾರ್, ನಿಂಗಶೆಟ್ಟಿ, ನಾಗೇಂದ್ರ, ವೆಂಕಟೇಶ್, ಮಾದೇಶ್ ಇತರರು ಇದ್ದರು.