ಜಿಲ್ಲೆ

ಕಾಂಗ್ರೆಸ್ ಸರ್ಕಾರದಿಂದ ತುಘಲಕ್ ದರ್ಬಾರ್

ಯಾದಗಿರಿ: ಮಂಡ್ಯ ಜಿಲ್ಲೆ ಕೆರೆಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವುಗೊಳಿಸಿದ್ದನ್ನು ಖಂಡಿಸಿ ಸೋಮವಾರ ಜಿಲ್ಲಾ ಬಿಜೆಪಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಧ್ಯಕ್ಷ ಅಮೀನರಡ್ಡಿ ಪಾಟೀಲ್ ಯಾಳಗಿ ಮಾತನಾಡಿ, ಕೆರೆಗೋಡಿನಲ್ಲಿ ಗ್ರಾಪಂ ಸದಸ್ಯರು ಸೇರಿ ಠರಾವು ಪಾಸ್ ಮಾಡುವ ಮೂಲಕ 108 ಅಡಿ ಎತ್ತರ ಹನುಮನ ಧ್ವಜಸ್ಥಂಬ ನಿರ್ಮಾಸಿದ ಧ್ವಜ ಹಾರಿಸಿದರೆ, ಕಾಂಗ್ರೆಸ್ ಕೆಲ ಪುಡಾರಿಗಳು ಪೊಲೀಸರನ್ನು ಬಳಸಿಕೊಂಡು ಆ ಸದಸ್ಯರ ಮೇಲೆ ಲಾಠಿಚಾಜರ್್ ಮಾಡಿಸಿದ್ದಾರೆ. ಈ ಸರ್ಕಾರ ರಾಮಭಕ್ತರ ಮೇಲೆ ದಬ್ಬಾಳಿಕೆ ಮಾಡುತ್ತಿದೆ. ಕರಸೇವಕರ, ರಾಮಭಕ್ತರ ಮೇಲೆ ಸರ್ಕಾರ ಕೆಂಗಣ್ಣು ಬೀರಿದರೆ ಬರುವ ದಿನಗಳಲ್ಲಿ ಇಡೀ ರಾಜ್ಯ ಹೊತ್ತುರಿಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆರೆಗೋಡು ಗ್ರಾಮಕ್ಕೆ ನಮ್ಮ ಪಕ್ಷದ ವಿಪಕ್ಷ ನಾಯಕ ಆರ್.ಅಶೋಕ ತೆರಳಿದರೆ ಭಾನುವಾರ ಮತ್ತೊಮ್ಮೆ ಪೊಲೀಸರಿಂದ ಲಾಠಿ ಪ್ರಹಾರ ನಡೆಸಿ, ಅಶೋಕರನ್ನು ಬಂಧಿಸಲಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಒಂದು ರೀತಿಯಲ್ಲಿ ತುಘಲಕ ದರ್ಬಾರ್ ನಡೆಯುತ್ತಿದೆ. ಹಿಂದುಪರ ಅದರಲ್ಲೂ ರಾಷ್ಟ್ರದ ಪರ ಘೋಷಣೆ ಕೂಗಿದವರ ಮೇಲೆ ಅನಗತ್ಯ ಕೇಸ್ ದಾಖಲಿಸಲಾಗುತ್ತಿದೆ. ಹುಬ್ಬಳ್ಳಿಯಲ್ಲಿ ಕರಸೇವಕರನ್ನು ಬಂಧಿಸಿ ಮಾನಸಿಕ ಕಿರುಕುಳ ನೀಡಿದೆ ಎಂದು ಹರಿಹಾಯ್ದರು.

ಲಲಿತಾ ಅನಪುರ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿದೆ. ಬರುವ ಲೋಕಸಭೆ ಚುನಾವಣೆಯಲ್ಲಿ ಜನತೆ ಆ ಪಕ್ಷಕ್ಕೆ ತಕ್ಕ ಉತ್ತರ ನೀಡಲಿದ್ದಾರೆ. ಕೆರೆಗೋಡು ಗ್ರಾಮದ ಘಟನೆ ತೀರಾ ಖಂಡನೀಯ. ಕೂಡಲೇ ತಪಪಿತಸ್ಥರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.