ತುಮಕೂರು: ದಾವಣಗೆರೆಯಲ್ಲಿ ಪಂಚಾಚಾರ್ಯರು 26 ವರ್ಷಗಳ ಬಳಿಕೆ ಒಂದೇ ವೇದಿಕೆಯಲ್ಲಿ ಆಸೀನರಾಗಿ ಶಿವಾಚಾರ್ಯರ ಶೃಂಗ ಸಮಾವೇಶವನ್ನು ಐತಿಹಾಸಿಕ ಎನ್ನಿಸಿದ್ದಾರೆ, ವೀರಶೈವ ಲಿಂಗಾಯತ ಸಂಗಮವನ್ನೂ ಐತಿಹಾಸಿಕ ವಾಗಿಸಿದ್ದಾರೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ಹೇಳಿದರು.
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಸ್ವಾಮೀಜಿ ಜನ್ಮದಿನದ ಪ್ರಯುಕ್ತ ಬುಧವಾರ ಮಠಕ್ಕೆ ಭೇಟಿ ನೀಡಿ ಡಾ.ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ಪೂಜೆ ಸಲ್ಲಿಸಿ, ಶ್ರೀಸಿದ್ಧಲಿಂಗ ಸ್ವಾಮೀಜಿ ಆಶೀರ್ವಾದ ಪಡೆದ ನಂತರ ಮಾತನಾಡಿ, ವೀರಶೈವ ಲಿಂಗಾಯತ ಸಮುದಾಯದ ಒಳ ಪಂಗಡಗಳ ಎಲ್ಲ ಸ್ವಾಮೀಜಿಗಳೂ ಒಟ್ಟಾಗಿ ಸೇರಿ ಎಲ್ಲ್ಲ ವ್ಯತ್ಯಾಸಗಳನ್ನು ಸರಿಪಡಿಸಿ ಕೊಂಡಿದ್ದಾರೆ. ಒಳ ಪಂಗಡಗಳು ಒಂದಾಗಬೇಕು ಎಂದು ನಾಯಕರಾದ ಶ್ಯಾಮನೂರು ಶಿವಶಂಕರಪ್ಪ, ಬಿ.ಎಸ್. ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ, ಎಸ್.ಎಸ್.ಮಲ್ಲಿಕಾರ್ಜುನ್ ಸೇರಿದ್ದಂತೆ ಎಲ್ಲ ನಾಯಕರಿಗೂ ಮನವಿ ಮಾಡಿದ್ದೇವೆ ಎಂದರು. ಈ ಹಿಂದೆ ಕಾಂಗ್ರೆಸ್ ಸರ್ಕಾರ ವೀರಶೈವರು ಬೇರೆ ಲಿಂಗಾಯತರು ಬೇರೆ ಎಂದು ಒಡೆದಾಳುವ ನೀತಿ ಮಾಡಿ ಅದರ ಪ್ರತಿಲ ತಿಂದಿದೆ. ಜಾತಿಗಣತಿ ಮಾಡುವ ಅಧಿಕಾರ ರಾಜಸರ್ಕಾರಕ್ಕೆ ಇಲ್ಲ, ಕೇಂದ್ರ ಸರ್ಕಾರಕ್ಕೆ ಇದೆ. ರಾಜ್ಯ ಸರ್ಕಾರ ವೀರಶೈವ ಲಿಂಗಾಯತರನ್ನ ಒಡೆಯುವ ಷಡ್ಯಂತ್ರ ನಡೆಸಿದೆ. ನಾವೆಲ್ಲಾ ಒಂದಾಗಬೇಕು ಎಂದು ಪೂಜ್ಯರಲ್ಲಿ ಮನವಿ ಮಾಡಿಕೊಂಡಿದ್ದೇವೆ ಎಂದರು.
ವಿಜಯೇಂದ್ರ ಕುರ್ಚಿ ಅಲ್ಲಾಡುತ್ತಿದೆ ಎಂಬ ಸಿಎಂ ಸಿದ್ದರಾಮಯ್ಯ ಟೀಕೆ ಬಗ್ಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಹಿಂದುಳಿದ ವರ್ಗದ ನಾಯಕರು. ರಾಜ್ಯಕ್ಕೆ ಅತಿ ಹೆಚ್ಚು ಬಜೆಟ್ ಕೊಟ್ಟವರು, ಅವರನ್ನು ಟೀಕೆ ಮಾಡುವುದಿಲ್ಲ. ಆದರೆ, ರಾಜ್ಯದ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ. ಸಣ್ಣಪುಟ್ಟ ವ್ಯಾಪಾರಿಗಳಿಗೆ ತೆರಿಗೆ ಹಾಕೋದು ಸರಿಯಲ್ಲ ಎಂದರು.
ವಿಜಯೇಂದ್ರ ವಿರೋಧ ಪಕ್ಷದ ಅಧ್ಯಕ್ಷರಾಗಿ ಕಾಂಗ್ರೆಸ್ ಸರ್ಕಾರದ ವೈಫಲ್ಯದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ, ಪಕ್ಷದಲ್ಲಿ ಹಿರಿಯರು, ಕಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷಬಲಪಡಿಸಿದ್ದಾರೆ ಎಂದು ಸಮರ್ಥಿಸಿಕೊಂಡರು.
ಮುಖ್ಯಮಂತ್ರಿ, ಕೃಷಿ ಮಂತ್ರಿಗಳು ಅಧಿಕಾರಿಗಳ ಸಭೆ ನಡೆಸಿ ರಾಜ್ಯದಲ್ಲಿ ಬೇಡಿಕೆ ಇರುವ ಯೂರಿಯಾ ಪೂರೈಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುವ ಆಸಕ್ತಿ ವಹಿಸಿಲ್ಲ, ಸರ್ಕಾರದಲ್ಲಿ ಹಣವಿಲ್ಲ. ಹಣಕ್ಕಾಗಿ ಜನರನ್ನು ವಿವಿಧ ರೂಪದಲ್ಲಿ ಶೋಷಣೆ ಮಾಡುತ್ತಿದ್ದಾರೆ. ಸಣ್ಣ ವ್ಯಾಪಾರಿಗಳಿಂದ ತೆರಿಗೆ ವಸೂಲಿ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ ಮುಖಂಡ ಟಿ.ಆರ್.ಸದಾಶಿವಯ್ಯ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಯುವ ಅಧ್ಯಕ್ಷ ಡಾ.ಕೆ.ಎಲ್.ದರ್ಶನ್, ಮುಖಂಡರಾದ ಚಂಗಾವಿ ರವಿ, ಮರಿತಿಮ್ಮಯ್ಯ, ಅರುಣ್ ಇದ್ದರು.
ಬಿ.ವೈ.ವಿಜಯೆಂದ್ರ ಸಮರ್ಥವಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದಾರೆ. ಮುಂಬರುವ ಸ್ಥಳಿಯ ಸಂಸ್ಥೆಗಳ ಚುನಾವಣೆಗಳು ವಿಜಯೇಂದ್ರ ಅವರ ನೇತೃತ್ವದಲ್ಲೇ ನಡೆದು ಬಿಜೆಪಿ ಅಧಿಕಾರ ಹಿಡಿಯುತ್ತದೆ. ಅಧ್ಯಕ್ಷರ ಕುರ್ಚಿ ಅಲುಗಾಡುತ್ತಿದೆ ಎಂಬುದು ಭ್ರಮೆ. ಯಡಿಯೂರಪ್ಪ ಹಾಗೂ ವಿಜಯೇಂದ್ರರ ವಿರುದ್ಧ ಮಾತನಾಡುತ್ತಿದ್ದವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಅವರ ಬಗ್ಗೆ ಮಾತನಾಡುವುದಿಲ್ಲ. ವೀರಶೈವ ಲಿಂಗಾಯತರು ಒಳಪಂಗಡಗಳ ಭೇದ ಬಿಟ್ಟು ಒಗ್ಗಟ್ಟಾಗಬೇಕಿದೆ.| ರೇಣುಕಾಚಾರ್ಯ ಮಾಜಿ ಸಚಿವ