ಚಿತ್ರದುರ್ಗ: ಹಿಂದಿನ ಬಿಜೆಪಿ ಶೇ. 40 ಪರ್ಸಂಟೇಜ್ ಸರ್ಕಾರವೆಂದು ಆರೋಪಿಸಿದ್ದ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದಲ್ಲಿದ್ದು, ಶೇ 50ರಿಂದ 60 ಪರ್ಸಂಟೇಜ್ ಪಡೆಯುತ್ತಿದೆ. ಭ್ರಷ್ಟಾಚಾರ ದಿನೇ ದಿನೆ ವ್ಯಾಪಕವಾಗಿ ವಿಸ್ತರಿಸುತ್ತಿದೆ ಎಂದು ಎಎಪಿ ಜಿಲ್ಲಾಧ್ಯಕ್ಷ ಬಿ.ಇ. ಜಗದೀಶ್ ದೂರಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಸತಿ ಇಲಾಖೆ ಸಚಿವರು ಹಣ ಪಡೆದು ವಸತಿ ಸೌಲಭ್ಯ ನೀಡುವ ಕಾರ್ಯ ಹೆಚ್ಚಾಗಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂಬುದಕ್ಕೆ ಇದಕ್ಕಿಂತ ನಿದರ್ಶನ ಬೇಕೆ ಎಂದು ಪ್ರಶ್ನಿಸಿದರು.
ಹಣ ಕೊಡದೆ ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಕೆಲಸವಾಗುತ್ತಿಲ್ಲ. ಇದರಿಂದ ಬಡವರ ಬದುಕು ದುಸ್ಥಿತಿಯಲ್ಲಿದೆ. ಭ್ರಷ್ಟಾಚಾರ ಮಟ್ಟ ಹಾಕುತ್ತಿದ್ದ ಲೋಕಾಯುಕ್ತ ಅಧಿಕಾರವನ್ನು ಮೊಟುಕುಗೊಳಿಸಿದ್ದಾರೆ. ರಾಜ್ಯದ ಜನತೆ ಕಾಂಗ್ರೆಸ್ ಆಡಳಿತದ ನೀತಿಗಳಿಂದ ಬೇಸತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಅಧಿಕಾರ ಶೇ. 30ರಷ್ಟಿರುವ ಶ್ರೀಮಂತರ ಕೈಯಲ್ಲಿದೆ. ಶೇ. 70 ರಷ್ಟಿರುವ ಬಡವರು ಮತ್ತಷ್ಟು ಬಡವರಾಗುತ್ತಿದ್ದಾರೆ. ಕಾಂಗ್ರೆಸ್ ಶಾಸಕರೇ ಸ್ವಪಕ್ಷದ ಸಚಿವರ ವಿರುದ್ಧ ಕಿಡಿಕಾರುತ್ತಿದ್ದಾರೆ. ಅಧಿಕಾರಿಗಳ ಮೂಲಕ ರಾಜಕಾರಣಿಗಳು ಹಣ ಲೂಟಿಗೆ ಮುಂದಾಗಿದ್ದಾರೆ. ಇದಕ್ಕೆ ಯಾವುದೇ ಸಾಕ್ಷಾೃಧಾರ ಸಿಗದಂತೆ ಓಲೈಕೆ ರಾಜಕೀಯ ಬೇರೂರಿರುವುದೇ ಕಾರಣ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕದಿದ್ದರೆ, ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಸಿದರು.
ಪಕ್ಷದ ಕಾರ್ಯದರ್ಶಿ ರಾಮಣ್ಣ, ಸಂಘಟನಾ ಕಾರ್ಯದರ್ಶಿ ರವಿ, ಪ್ರಧಾನ ಕಾರ್ಯದರ್ಶಿ ಲೋಕೇಶ್, ಜಂಟಿ ಕಾರ್ಯದರ್ಶಿ ದಾಸಪ್ಪ ಇದ್ದರು.