ಜಿಲ್ಲೆ

ಕಾಂಗ್ರೆಸ್ ಸರ್ಕಾರದ ವಿರುದ್ಧ ರಣಕಹಳೆ

ಹೊಸಪೇಟೆ: ಕುರುಬರಿಗೆ ಎಸ್ಟಿ ಪಟ್ಟಿಗೆ ಸೇರಿಸುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ತಾಲೂಕು ವಾಲ್ಮೀಕಿ ನಾಯಕ ಸಮಾಜದ ನೇತೃತ್ವದಲ್ಲಿ ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ನಗರದ ವಾಲ್ಮೀಕಿ ವೃತ್ತದಿಂದ ಆರಂಭಗೊAಡ ಮೆರವಣಿಗೆ ಮದಕರಿ ನಾಯಕ ವೃತ್ತದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆಯಾಗಿ ಮಾರ್ಪಟ್ಟಿತು. ಈ ವೇಳೆ ಸಮುದಾಯದ ಮುಖಂಡರು ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಡಾ.ಪುನೀತ್ ರಾಜ್ ಕುಮಾರ ವೃತ್ತದಲ್ಲಿ ಸಮಾವೇಶಗೊಂಡಿತು. ಪ್ರತಿಭಟನೆಯಲ್ಲಿ ಸರ್ಕಾರದ ವಿರುದ್ಧ ಕಪ್ಪು ಶಾಲು ಧರಿಸಿ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಗೋಸಲ ಭರ್ಮಪ್ಪ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾತಿ, ಜಾತಿ ನಡುವೆ ಕಲಹ ಸೃಷ್ಟಿ ಮಾಡಲು ಹೊರಟಿದ್ದಾರೆ. ಈ ಸಮುದಾಯಗಳನ್ನು ಕನಿಷ್ಠ ಸೌಲಭ್ಯಗಳಿಂದ ವಂಚಿತರನ್ನಾಗಿ ಮಾಡುವ ಹುನ್ನಾರ ನಡೆದಿದೆ. ವಾಲ್ಮೀಕಿ ಸಮಾಜದ 14 ಜನ ಶಾಸಕರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಅವರ ಕೈಯನ್ನು ಸಿಎಂ ಸಿದ್ದರಾಮಯ್ಯ ಕಟ್ಟಿ ಹಾಕಿದ್ದಾರೆ. ಶಾಸಕರು, ಎಂಎಲ್‌ಸಿಗಳು ಸಹ ಅಧಿಕಾರಕ್ಕೆ ಅಂಟಿಕೊಂಡಿದ್ದಾರೆ. ಅವರು ಸಮಾಜದ ಪರವಾಗಿ ನಿಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸಲಾಗುವುದು. ಸರ್ಕಾರಕ್ಕೂ ಹತ್ತು ದಿನಗಳ ಗಡುವು ನೀಡಲಾಗಿದ್ದು, ನಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ಬಿ.ಎಸ್.ಜಂಬಯ್ಯ ನಾಯಕ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಎಸ್ಸಿ, ಎಸ್ಟಿ ಸಮಾಜವನ್ನು ತುಳಿಯಲು ಬಂದಿದ್ದಾರೆ. ಅವರು ಒಂದು ಜಾತಿ ಸಮುದಾಯಕ್ಕೆ ಸೀಮಿತವಾಗಿ ಎಸ್ಟಿ ಸಮಾಜದ ಮಕ್ಕಳ ಅನ್ನ ಹಾಗೂ ಶಿಕ್ಷಣದ ಹಕ್ಕನ್ನು ಕಿತ್ತುಕೊಳ್ಳಲು ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಸಮಾಜದ ಕಾರ್ಯದರ್ಶಿ ದೇವರಮನಿ ಶ್ರೀನಿವಾಸ, ಪ್ರಮುಖರಾದ ಗುಜ್ಜಲ ನಾಗರಾಜ, ಎಸ್.ಎಸ್.ಚಂದ್ರಶೇಖರ್, ಬೆಳಗೋಡ್ ಅಂಬಣ್ಣ, ಗುಡಿಗುಡಿ ಸೋಮನಾಥ, ಕಿನ್ನಾಳ್ ಹನುಮಂತ ಇತರರಿದ್ದರು.ಜ

ಜಿಲ್ಲಾಧಿಕಾರಿ ಆಗಮನಕ್ಕೆ ಪಟ್ಟು

ನಗರದ ಪುನೀತ್ ರಾಜ್ ಕುಮಾರ ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಪ್ರತಿಭಟನಾಕಾರರು, ಮನವಿ ಸ್ವೀಕಾರಕ್ಕೆ ಬಂದ ಎಡಿಸಿ ಬಾಲಕೃಷ್ಣಪ್ಪ ಮತ್ತು ತಹಸೀಲ್ದಾರ್ ಶ್ರುತಿ ಎಂ.ಮಳ್ಳನಗೌಡ್ರ್ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿಪತ್ರ ಸ್ವೀಕರಿಸಬೇಕು ಎಂದು ಪಟ್ಟು ಹಿಡಿದರು. ಬಳಿಕ ಎಸ್ಪಿ ಎಸ್.ಜಾಹ್ನವಿ ಜತೆಗೂಡಿ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮನವಿ ಸ್ವೀಕರಿಸಿದರು.