ಚನ್ನರಾಯಪಟ್ಟಣ: ಬೆಂಗಳೂರಿನಲ್ಲಿ ಈಚೆಗೆ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ಐವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ತಾಲೂಕು ಘಟಕದ ಮುಖಂಡರು ಪಟ್ಟಣದ ಕೃಷ್ಣರಾಜೇಂದ್ರ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಆರ್‌ಸಿಬಿ ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭ್ರಮಾಚರಣೆಗೆ ಸೇರಿದ್ದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಅಮಾಯಕರು ಮೃತಪಟ್ಟಿದ್ದಾರೆ. ಅವರ ಸಾವಿಗೆ ರಾಜ್ಯ ಸರ್ಕಾರವೇ ಹೊಣೆಯಾಗಿದೆ. ಮಂಗಳವಾರ ತಡರಾತ್ರಿ ಪಂದ್ಯ ಮುಗಿದಿದೆ. ಬುಧವಾರವೇ ತರಾತುರಿಯಲ್ಲಿ ಸಂಭ್ರಮಾಚರಣೆ ಸಮಾರಂಭ ಆಯೋಜಿಸುವ ಅಗತ್ಯ ಏನಿತ್ತು, ಪೊಲೀಸರು ವಿಜಯೋತ್ಸವ ಬೇಡ ಎಂದು ಆಯೋಜಕರ ಮನವಿಯನ್ನು ತಿರಸ್ಕರಿಸಿ ಅನುಮತಿ ನಿರಾಕರಿಸಿದ್ದರು. ಆದರೆ ಸರ್ಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವವರೇ ಮುಂಚೂಣಿಯಲ್ಲಿ ನಿಂತು ವಿಜಯೋತ್ಸವ ಆಚರಿಸುವ ನೆಪವೊಡ್ಡಿ ಅಮಾಯಕ ಜೀವಗಳನ್ನು ಬಲಿ ತೆಗೆದುಕೊಂಡಿದ್ದಾರೆ. ಇಷ್ಟು ಸಾಲದೆಂಬಂತೆ ಆರ್‌ಸಿಬಿ, ಕೆಎಸ್‌ಸಿಎ ಹಾಗೂ ಡಿಎನ್‌ಎ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಮಾಡಲು ಅನುಮತಿ ಕೊಟ್ಟಿಲ್ಲ ಎಂದು ಆಮೇಲೆ ಮೊಸಳೆ ಕಣ್ಣೀರು ಸುರಿಸುತ್ತಾರೆ. ಅನುಮತಿ ಕೊಟ್ಟಿಲ್ಲ ಎಂದರೆ ಪ್ರವೇಶಕ್ಕೆ ಅವಕಾಶ ಕೊಟ್ಟವರು ಯಾರು ಎಂದು ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ನಾಗೇಶ್ ಹಿರಿಬಿಳ್ತಿ ಪ್ರಶ್ನಿಸಿದರು.
ಪೂರ್ವ ತಯಾರಿ ಇಲ್ಲದ ಕಾರಣ ಪೊಲೀಸರು ಸಂಭ್ರಮಾಚರಣೆಗೆ ಅನುಮತಿ ನೀಡಿರಲಿಲ್ಲ. ಆದರೂ ರಾಜ್ಯ ಸರ್ಕಾರ ಹಠಕ್ಕೆ ಬಿದ್ದವರಂತೆ ಕಾರ್ಯಕ್ರಮ ಆಯೋಜಿಸಿ ಅಮಾಯಕರ ಪ್ರಾಣ ತೆಗೆದಿದೆ, ಸರಣಿ ಸಾವಾಗಿದೆ. ಅಮಾಯಕ ವ್ಯಕ್ತಿಗಳ ಜೀವ ಹೋಗಿದೆ. ಸರ್ಕಾರದ ಮುನ್ನೆಚ್ಚರಿಕೆ ಇಲ್ಲದೆ ಹಲವು ಜೀವಗಳು ಹೋಗಿವೆ. ಇದಕ್ಕೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹ ಸಚಿವರೇ ಕಾರಣಕರ್ತರಾಗಿದ್ದಾರೆ. ಆದರೆ, ಕಣ್ಣೊರೆಸುವ ತಂತ್ರವಾಗಿ ಅಮಾಯಕ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ ಎಂದು ಆರೋಪಿಸಿದರು.
ರಾಜ್ಯ ಪೊಲೀಸ್ ಇಲಾಖೆಗೆ ಆತ್ಮಸ್ಥೈರ್ಯ ತುಂಬುವ ಉದ್ದೇಶದಿಂದಲೇ ಬಿಜೆಪಿಯಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ. 11 ಅಭಿಮಾನಿಗಳ ಸಾವಿನ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಗೃಹ ಸಚಿವ ಜಿ.ಪರಮೇಶ್ವರ್ ರಾಜೀನಾಮೆ ನೀಡಲಿ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್ ನಂಬಿಹಳ್ಳಿ ಆಗ್ರಹಿಸಿದರು.
ತಾಲೂಕು ಮಂಡಲ ಅಧ್ಯಕ್ಷ ಗಂಗಾಧರ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಗೆದ್ದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನಡೆಸಿದ ಸಂಭ್ರಮೋತ್ಸವದಲ್ಲಿ ಅಮಾಯಕರು ಬಲಿಯಾಗಿದ್ದು, ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಕಾಲ್ತುಳಿತ ಪ್ರಕರಣ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಜಿ.ಪರಮೇಶ್ವರ ಅವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಒತ್ತಾಯಿಸಿದರಲ್ಲದೆ, ಅವರ ಭಾವಚಿತ್ರಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಮುಖಂಡರಾದ ಗಿರೀಶ್ ತೂಬಿನಕೆರೆ, ಹರ್ಷವರ್ಧನ್, ಕುಸುಮಾ, ಶೋಭಾ, ಲತಾ, ನಂಜುಂಡ ಮೈಮ್, ರಂಗೇಗೌಡ, ಮನು, ಮಂಜು, ದೇವರಾಜ್, ನಿತಿನ್, ಶ್ರವಣ, ವೆಂಕಟೇಶ ಚಾರಿ, ಭಾಸ್ಕರಾಚಾರಿ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು