oplus_1056 
ಜಿಲ್ಲೆ

ಕಾಂಗ್ರೆಸ್ ಸರ್ಕಾರ ದಲಿತ ವಿರೋಧಿ

ಚಿತ್ರದುರ್ಗ: ಒಳಮೀಸಲಾತಿ ಜಾರಿ ಮುನ್ನವೇ ಹೊಸ-ಬ್ಯಾಕ್‌ಲ್ಯಾಗ್ ಹುದ್ದೆ ನೇಮಕಾತಿ ತರಾತುರಿಯಲ್ಲಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ದಲಿತ ವಿರೋಧಿಯಾಗಿದೆ. ಸಾಮಾಜಿಕ ಬದ್ಧತೆ ಇದ್ದರೆ ಶೀಘ್ರ ಜಾರಿಗೊಳಿಸಲಿ ಎಂದು ಮಾದಿಗ ಸಮುದಾಯದ ಮುಖಂಡರು ಒತ್ತಾಯಿಸಿದರು.

ಪ್ರವಾಸಿ ಮಂದಿರದಲ್ಲಿ ಸೋಮವಾರ ಜಿಲ್ಲೆಯ ಎಲ್ಲ ರಾಜಕೀಯ ಪಕ್ಷಗಳ, ದಲಿತ ಸಮುದಾಯಗಳ, ನೌಕರರ ಸಂಘಟನೆಗಳ ಒಕ್ಕೂಟದ ಸದಸ್ಯರ ಸಭೆಯಲ್ಲಿ ಒಳಮೀಸಲಾತಿ ವಿಚಾರವಾಗಿ ಚರ್ಚಿಸಲಾಯಿತು.

ಸುಪ್ರೀಂಕೋರ್ಟ್‌ನ ತೀರ್ಪಿನಂತೆ ಒಳಮೀಸಲಾತಿ ಜಾರಿಗೆ ತಂದು ಆಯಾ ಜಾತಿಯ ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರಿ ಹುದ್ದೆ ಹಂಚುವ ಸಾಮಾಜಿಕ ನ್ಯಾಯದ ಮೊದಲ ಪಾಠವನ್ನೇ ಕಾಂಗ್ರೆಸ್ ಮಾರೆ ಮಾಚುತ್ತಿದೆ ಎಂದು ದೂರಿದರು.

ಒಳಮೀಸಲಾತಿ ಜಾರಿ ಆಗುವವರೆಗೂ ಬ್ಯಾಕ್‌ಲಾಗ್ ಅಥವಾ ಹೊಸ ನೇಮಕಾತಿ ಮಾಡಿದರೆ, ಸಮಾನ ಪ್ರಾತಿನಿಧ್ಯದ ಅವಕಾಶವನ್ನು ಕಿತ್ತುಕೊಳ್ಳುವ ಕುತಂತ್ರವಾಗಲಿದೆ. ಇದನ್ನು ಇಡೀ ಕರ್ನಾಟಕದ ಮಾದಿಗ ಸಮುದಾಯ ಖಂಡಿಸಲಿದೆ. ಹೀಗಾಗಿ ಜಾರಿ ಬಳಿಕವೇ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸುವ ಕುರಿತು ಅಭಿಪ್ರಾಯಗಳು ವ್ಯಕ್ತವಾದವು.

ಜಿಲ್ಲೆಯ ಎಲ್ಲ ದಲಿತ, ಅಂಬೇಡ್ಕರ್ ವಾದಿ, ಮಾದಿಗ ಸಂಘಟನೆಗಳು ಒಳಗೊಂಡು ಸಮಿತಿ ರಚಿಸುವ ಜವಾಬ್ದಾರಿಯನ್ನು ಮಾಜಿ ಜಿಪಂ ಸದಸ್ಯ ಬಿ.ಪಿ.ಪ್ರಕಾಶ್‌ಮೂರ್ತಿ, ಹುಲ್ಲೂರು ಕುಮಾರ್ ಅವರಿಗೆ ವಹಿಸಲಾಯಿತು.

ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೊದಲ ಸಂಪುಟ ಸಭೆಯಲ್ಲಿ ಒಳಮೀಸಲಾತಿ ವಿಧೇಯಕ ಜಾರಿಗೊಳಿಸುವುದಾಗಿ ಚಿತ್ರದುರ್ಗದಲ್ಲಿ ಈ ಹಿಂದೆ ನಡೆದ ಸಮಾವೇಶದಲ್ಲಿ ಭರವಸೆ ನೀಡಿದ್ದು, ಇಲ್ಲೇ ರಾಜ್ಯಮಟ್ಟದ ಸಮಾವೇಶ ಆಯೋಜಿಸಿ ಸರ್ಕಾರಕ್ಕೆ ಅಂತಿಮ ಗಡುವು ನೀಡಲು ತೀರ್ಮಾನಿಸಲಾಯಿತು.

ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಮುಖಂಡರಾದ ಬಿ.ಪಿ.ಪ್ರಕಾಶ್‌ಮೂರ್ತಿ, ಲಕ್ಷ್ಮಣ್, ನರಸಿಂಹರಾಜು, ತಿರಾಂಪುರದ ಪೆನ್ನಣ್ಣ, ಅಂಬಣ್ಣ ಹಾರೋಲಿಕರ್, ಬಸವರಾಜ್ ಕೌತಳ್, ಕೆ.ಕುಮಾರ್, ಬಿ.ಪಿ.ತಿಪ್ಪೇಸ್ವಾಮಿ, ಮೊರಾರ್ಜಿ, ಕೋಡಿಹಳ್ಳಿ ಸಂತೋಷ್, ಶಂಕರ್ ಕೊಟ್ಟ, ಹರಿಹರ ಎಚ್.ಆರ್.ಮಲ್ಲೇಶ್, ವೀರಭದ್ರಪ್ಪ, ಹುಲ್ಲೂರು ಕುಮಾರ್, ಯಲ್ಲಪ್ಪ, ಕೆ.ಪಿ.ಶ್ರೀನಿವಾಸ್, ಹೆಗ್ಗೆರೆ ಮಂಜುನಾಥ್, ಮಾರುತೇಶ್ ಇತರರಿದ್ದರು.