ಜಿಲ್ಲೆ

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ನೂರರಷ್ಟು ಸತ್ಯ

ಹನೂರು: ರಾಜ್ಯದಲ್ಲಿ 140ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರರಷ್ಟು ಸತ್ಯ ಎಂದು ಶಾಸಕ ಆರ್.ನರೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.


ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಮಾಪುರ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯಲ್ಲಿ ಮತಯಾಚಿಸಿ ಮಾತನಾಡಿದರು.


ಕಾಂಗ್ರೆಸ್ ಸರ್ಕಾರ ಇಂದಿರಾಗಾಂಧಿ ಅವರ ಕಾಲದಿಂದ ಇಂದಿನವರೆಗೂ ಉತ್ತಮ ಆಡಳಿತ ನೀಡಿದ್ದು, ಜನರ ಕಲ್ಯಾಣ ಹಾಗೂ ಅಭಿವೃದ್ಧಿಗಾಗಿ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಜೀತಪದ್ಧತಿ ನಿರ್ಮೂಲನೆ, 20 ಅಂಶಗಳ ಕಾರ್ಯಕ್ರಮ, ಉಳುವವನೇ ಭೂ ಒಡೆಯ ಹಾಗೂ ನರೇಗಾ ಯೋಜನೆ ಸೇರಿದಂತೆ ಅನೇಕ ಕಾರ್ಯಕ್ರಮಗಳಿಂದ ಬಡವರು, ಕೃಷಿಕರು, ಹಿಂದುಳಿದ ವರ್ಗ ಹಾಗೂ ದೀನ ದಲಿತರಿಗೆ ಹೆಚ್ಚಿನ ಅನುಕೂಲವಾಗಿದೆ. ಇನ್ನು ಸಿದ್ದರಾಮಯ್ಯ ನೇತೃತ್ವದ ಆಡಳಿತಾವಧಿಯಲ್ಲಿ ರಾಜ್ಯದಲ್ಲಿ ಹೊಸ ಯೋಜನೆಗಳ ಅನುಷ್ಠಾನದ ಮೂಲಕ ಅಭಿವೃದ್ಧಿಯ ಪರ್ವವೇ ನಡೆದಿದೆ. ಹನೂರು ಕ್ಷೇತ್ರದಲ್ಲಿ ಸಾಕಷ್ಟು ಶಾಶ್ವತ ಯೋಜನೆಗಳು ಅನುಷ್ಠಾನಗೊಂಡಿವೆ, ಇದು ಕಾಂಗ್ರೆಸ್‌ನಿಂದ ಸಾಧ್ಯವಾಯಿತು. ಹಾಗಾಗಿ ಕಾಂಗ್ರೆಸ್ ಜನಪರವಾದ ಪಕ್ಷ. ಈಗಾಗಲೇ ಬಿಜೆಪಿ ಸರ್ಕಾರದ ದುರಾಡಳಿತದಿಂದ ಬೇಸತ್ತಿರುವ ಜನತೆ ಕಾಂಗ್ರೆಸ್‌ಗೆ ಒಲವನ್ನು ತೋರುತ್ತಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈ ದಿಸೆಯಲ್ಲಿ ಕ್ಷೇತ್ರದಲ್ಲಿ ಇತರ ಪಕ್ಷದಿಂದ ಹೆಚ್ಚು ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿದ್ದು, ಗೆಲುವಿನ ದಿಕ್ಸೂಚಿಯಾಗಿದೆ. ಆದ್ದರಿಂದ ಕ್ಷೇತ್ರದ ಅಭಿವೃದ್ಧಿಗೆ ಕಾಂಗ್ರೆಸ್ ಬೆಂಬಲಿಸುವಂತೆ ಮನವಿ ಮಾಡಿದರು.


ಜಿಪಂ ಮಾಜಿ ಉಪಾಧ್ಯಕ್ಷ ಬಸವರಾಜು, ತಾಪಂ ಮಾಜಿ ಸದಸ್ಯ ಜಾವೀದ್ ಅಹಮದ್, ಮುಖಂಡರಾದ ವಿಷ್ಣುಕುಮಾರ್, ಮಹದೇವಪ್ರಸಾದ್, ರಾಜು, ಗಣೇಶ್ ಮತ್ತಿತರರಿದ್ದರು.