ಹೂವಿನಹಡಗಲಿ: ಪಟ್ಟಣದ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವ ಕಾಂಗ್ರೆಸ್ ಸದಸ್ಯರ ಮನೆಯ ಮುಂದೆ ಪ್ರತಿಭಟನೆ ನಡೆಸುವುದಾಗಿ ಮಾಜಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಹೇಳಿದರು.
ಕಾಂಗ್ರೆಸ್ಸಿನ ಕೆಲ ಸದಸ್ಯರು ಪಕ್ಷದ ಆದೇಶ ಉಲ್ಲಂಘಿಸುತ್ತಿರುವುದನ್ನು ಖಂಡಿಸಿ ಪಟ್ಟಣದ ಊರಮ್ಮದೇವಿ ದ್ವಾರ ಬಾಗಿಲಿನಿಂದ ಶಾಸ್ತ್ರಿ ವೃತ್ತದವರೆಗೆ ಮೆರವಣಿಗೆಯಲ್ಲಿ ಮಂಗಳವಾರ ಮಾತನಾಡಿದರು. ಪುರಸಭೆಯಲ್ಲಿ ಕಳೆದ 10 ವರ್ಷಗಳಿಂದ ಕಾಂಗ್ರೆಸ್ ಆಡಳಿತ ಇದೆ. ಆದರೆ, ಕೆಲವರು ಕಾಂಗ್ರೆಸ್‌ನಿಂದ ಲಾಭ ಪಡೆದು ಈಗ ಪಕ್ಷದ್ರೋಹಿ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನನ್ನಿಂದ ಎಲ್ಲ ಸಹಾಯ ಪಡೆದು ಈಗ ಏನೂ ಆಗಿಲ್ಲವೆಂಬಂತೆ ಬೇರೆಯವರ ಬಳಿ ಹೋಗಿದ್ದಾರೆ. ಅವರಿಗೆ ತಾಕತ್ತಿದ್ದರೆ ರಾಜೀನಾಮೆ ನೀಡಿ ಚುನಾವಣೆ ಎದುರಿಸಲಿ. ಯಾರದೋ ಆಮಿಷಗಳಿಗೆ ಪಕ್ಷದ್ರೋಹಿ ಕೆಲಸ ಮಾಡುತ್ತಿದ್ದಾರೆ. ಸರ್ಜಪ್ಪನವರ ಶಫಿ, ಸೊಪ್ಪಿನ ಮಂಜುನಾಥ ಎಲ್ಲಿದ್ದೀರಪ್ಪ?ಎಲ್ಲ ಲಾಭ ಪಡೆದ ಮೇಲೆ ಕಾಣೆಯಾಗಿದ್ದೀರಿ. ಈಗಲೂ ಕಾಲ ಮಿಂಚಿಲ್ಲ. ನೀವು ಬಂದರೆ ನೀವು ಹೇಳಿದವರನ್ನೇ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಮಾಡೋಣ. ಇಲ್ಲದಿದ್ದರೆ ಜ.30 ರಂದು ಚುನಾವಣೆ ವೇಳೆ ಪುರಸಭೆಗೆ ಮುತ್ತಿಗೆ ಹಾಕುತ್ತೇವೆ. ಪ್ರತಿ ವಾರ ತಲಾ ಒಬ್ಬ ಸದಸ್ಯರ ಮನೆಯ ಮುಂದೆ ಪ್ರತಿಭಟನೆ ನಡೆಸುವುದಾಗಿ ಪರಮೇಶ್ವರ ನಾಯಕ ಎಚ್ಚರಿಸಿದರು.
ಜಿಪಂ ಮಾಜಿ ಸದಸ್ಯ ಪಿ.ವಿಜಯಕುಮಾರ್ ಮಾತನಾಡಿ, ಶಾಸಕರು ನಮ್ಮ ಪಕ್ಷದ ಸದಸ್ಯರನ್ನು ಕರೆದುಕೊಂಡು ಹೋಗಿದ್ದಾರೆ ಎಂದು ದೂರಿದರು. ಎ.ಕೊಟ್ರೇಶ್, ವಕೀಲರಾದ ಚಂದ್ರನಾಯ್ಕ, ಸುಧಾಕರ, ಕಾಂಗ್ರೆಸ್ ಮಹಿಳಾ ಘಟಕದ ತಾಲೂಕು ಅಧ್ಯಕ್ಷ ಬಸಮ್ಮ ಇತರರಿದ್ದರು.