ಮದ್ದೂರು ತಾಲೂಕಿನ ಮಾಲಗಾರನಹಳ್ಳಿಯಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರ ಸಭೆಯಲ್ಲಿ ಕೆಪಿಸಿಸಿ ಸದಸ್ಯ ಎಸ್.ಗುರುಚರಣ್ ಮಾತನಾಡಿದರು. ಕಂಠಿಸುರೇಶ್, ರಾಘವ, ಪಿ.ಸಂದರ್ಶ, ಆನಂದ್ ಇದ್ದರು. 
ಜಿಲ್ಲೆ

ಕಾಂಗ್ರೆಸ್ ಸಂಘಟಿಸಲು ಗ್ರಾಮಗಳಿಗೆ ಭೇಟಿ

Mandya

ಮದ್ದೂರು: ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲವರ್ಧನೆ ಮಾಡುವ ಉದ್ದೇಶದಿಂದ ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಮುಖಂಡರು, ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷ ಸಂಘಟನೆ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಸದಸ್ಯ ಎಸ್.ಗುರುಚರಣ್ ತಿಳಿಸಿದರು.

ತಾಲೂಕಿನ ವೈದ್ಯನಾಥಪುರ, ನಗರಕೆರೆ, ಸೋಂಪುರ, ಹುಲಿಗೆರೆಪುರ ಹಾಗೂ ಮಾಲಗಾರನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಭಾನುವಾರ ಭೇಟಿ ಕಾರ್ಯಕರ್ತರ ಹಾಗೂ ಮುಖಂಡರ ಸಭೆ ಏರ್ಪಡಿಸಿ ಮಾತನಾಡಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆದೇಶದ ಮೇರೆಗೆ ಪ್ರತಿ ಹಳ್ಳಿಗಳಿಗೆ ಹಾಗೂ ಬೂತ್‌ಗಳಿಗೆ ಭೇಟಿ ನೀಡಿ ಕಾರ್ಯಕರ್ತರ ಹಾಗೂ ಮುಖಂಡರ ಕುಂದು ಕೊರತೆಗಳನ್ನು ಆಲಿಸಿ ಪಕ್ಷವನ್ನು ಇನ್ನೂ ಬಲಿಷ್ಠ ಗೊಳಿಸಲು ಕಾರ್ಯತಂತ್ರ ರೂಪಿಸಲಾಗುತ್ತಿದೆ ಎಂದರು.

ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ತಾಲೂಕಿನಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನೀನೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿರುವ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ ಮಾಡುವ ಉದ್ದೇಶದಿಂದ ತಾಲೂಕಿನಾದ್ಯಂತ ನಿರಂತರ ಪ್ರವಾಸ ಮಾಡಿ ಈಗಿನಿಂದಲೇ ಪಕ್ಷವನ್ನು ಬಲಿಷ್ಠಗೊಳಿಸಲು ಮುಂದಾಗಿದ್ದೇನೆ ಎಂದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತವಾಗಿದ್ದು, ಕಾಂಗ್ರೆಸ್‌ನಿಂದ ಮಾತ್ರ ದೇಶದ ಹಾಗೂ ರಾಜ್ಯದ ಎಲ್ಲ ವರ್ಗದ ಜನರ ಅಭಿವೃದ್ಧಿ ಸಾಧ್ಯ ಎಂಬುವುದನ್ನು ಜನರು ಮನಗಂಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಟಿಎಪಿಸಿಎಂಎಸ್ ಉಪಾಧ್ಯಕ್ಷ ರಾಘವ, ಜಿಪಂ ಮಾಜಿ ಅಧ್ಯಕ್ಷ ಕಂಠಿಸುರೇಶ್, ಮುಖಂಡರಾದ ಆನಂದ್, ನವೀನ್, ಉಮಾಶಂಕರ್, ರಮೇಶ್, ಚಂದ್ರು, ಶಿವಲಿಂಗಯ್ಯ, ಪುರುಷೋತ್ತಮ್, ಸಿದ್ದ, ರಾಘು ಮತ್ತಿತರರು ಹಾಜರಿದ್ದರು.