ಜಿಲ್ಲೆ

ಕಾಂಗ್ರೆಸ್ ವತಿಯಿಂದ ವೇದನೆಯ ಸಮಾವೇಶ

ಎ.ಎಸ್.ಮಣಿಕಂಠ

ಚಾಮರಾಜನಗರ: ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಬೆಲೆ ಏರಿಕೆ, ಹದಗೆಟ್ಟ ಕಾನೂನು ಸುವ್ಯವಸ್ಥೆ ನಡುವೆ ಕಾಂಗ್ರೆಸ್ ಸರ್ಕಾರ ಸಾಧನೆ ಸಮಾವೇಶ ನಡೆಸುತ್ತಿದ್ದು, ಅದು ಜನರ ವೇದನೆಯ ಸಮಾವೇಶವಾಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದರು.

ಬಿಜೆಪಿ ಸರ್ಕಾರ ಶೇ.40 ರಷ್ಟು ಭ್ರಷ್ಟಾಚಾರ ನಡೆದಿದೆ ಎಂದು ದೂರಿದ್ದರು. ಆದರೇ ಯಾರಿಂದ ನಮ್ಮ ಮೇಲೆ ಆರೋಪ ಮಾಡಿಸಿದ್ದಾರೋ ಅವರೇ ಕಾಂಗ್ರೆಸ್ ಸರ್ಕಾರದಲ್ಲಿ ಶೇ.60 ರಷ್ಟು ಭ್ರಷ್ಟಾಚಾರ ನಡೆದಿದೆ ಎನ್ನುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಮಿತಿಮೀರಿ ಹೋಗಿದೆ. ರಾಜ್ಯದಲ್ಲಿ ಬೆಳಗ್ಗೆ ಕುಡಿಯುವ ಹಾಲಿನಿಂದ ಹಿಡಿದು, ರಾತ್ರಿ ಕುಡಿಯುವ ಹಾಲ್ಕೋಹಾಲ್ ವರೆಗೂ ಬೆಲೆ ಏರಿಕೆ ಹೆಚ್ಚಾಗಿದೆ. ಒಂದು ಕುಟುಂಬದಿಂದ 20 ಸಾವಿರದಷ್ಟು ದರೋಡೆ ಮಾಡುತ್ತಿದ್ದಾರೆ. ಆದರೇ ಕಾಂಗ್ರೆಸ್ ಸರ್ಕಾರ ಹಂಪಿಯಲ್ಲಿ 2 ವರ್ಷದ ಸಾಧನಾ ಸಮಾವೇಶ ಮಾಡಲು ಮುಂದಾಗಿದೆ. ಅಭಿವೃದ್ಧಿ ಇಲ್ಲದೇ ಸಾಧನೆ ಎಲ್ಲಿಂದ ಸಾಧ್ಯವಾಗುತ್ತದೆ ಎಂದು ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಕಾಂಗ್ರೆಸ್ ಸರ್ಕಾರ ಎಸ್ಸಿ,ಎಸ್ಟಿ ಗಳಿಗೆ 42 ಸಾವಿರ ಕೋಟಿ ರೂ, ಮೀಸಲು ಇಟ್ಟಿದ್ದೇವೆ ಎಂದು ಹೇಳುತ್ತಾರೆ. ಈ ಅನುದಾನದಲ್ಲಿ ಹಿಂದುಳಿದ ಜಿಲ್ಲೆಗೆ ಎಷ್ಟು ಖರ್ಚಾಗಿದೆ ಎಂಬುದನ್ನು ಜಿಲ್ಲಾ ಉಸ್ತುವಾರಿ ಸಚಿವರು ಲೆಕ್ಕ ಕೊಡಬೇಕು. ದಲಿತರ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡು ದಲಿತರಿಗೆ ಅನ್ಯಾಯ ಮಾಡುತ್ತಿದ್ದಾರೆ. ದೇಶಕ್ಕೆ ಕಾಂಗ್ರೆಸ್ ಕಂಟಕವಾಗಿದ್ದು, ಜನರಿಗೂ ಇದು ನಿಧಾನಕ್ಕೆ ಅರ್ಥವಾಗುತ್ತಿದೆ ಎಂದು ಕಿಡಿ ಕಾರಿದರು.

ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಮಾತನಾಡಿ, ರಾಜ್ಯದಲ್ಲಿ 21 ಸಾವಿರ ಸರ್ಕಾರಿ ಶಾಲಾ ಕೊಠಡಿಗಳ ದುರಸ್ಥಿಗೆ ಅಗತ್ಯವಾದ 531 ಕೋಟಿ ರೂ, ಹಾಗೂ ಹೆಚ್ಚುವರಿ ಶಾಲಾ ಕೊಠಡಿ ನಿರ್ಮಾಣಕ್ಕೆ ಬೇಕಾದ 1879 ಕೋಟಿ ರೂ, ಹಣವನ್ನು ನೀಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಆದರೂ ಯಾವ ಪುರುಷಾರ್ಥಕ್ಕಾಗಿ ಕಾಂಗ್ರೆಸ್ ಸಾಧನಾ ಸಮಾವೇಶ ಮಾಡುತ್ತಿದೆ ಎಂದು ದೂರಿದರು.

ಗೋಷ್ಠಿಯಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಪರಮಾನಂದ, ಜಿಲ್ಲಾಧ್ಯಕ್ಷ ನಿರಂಜನ್ ಕುಮಾರ್, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರು, ಕಾಡಾ ಮಾಜಿ ಅಧ್ಯಕ್ಷ ನಿಜಗುಣರಾಜು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ವೃಷಭೇಂದ್ರಪ್ಪ, ಮೂಡ್ನಾಕೂಡು ಪ್ರಕಾಶ್, ಮಹದೇವಸ್ವಾಮಿ, ಮಾಧ್ಯಮ ವಕ್ತಾರ ಕಾಡಹಳ್ಳಿ ಕುಮಾರ್ ಹಾಜರಿದ್ದರು.

ಪಾಕಿಸ್ತಾನ ಮುಗಿಸಿದರೇ, ಕಾಂಗ್ರೆಸ್ ಮುಗಿಸಿದಂತೆ:

ದೇಶದಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಪಾಕಿಸ್ತಾನವೇ ಶಕ್ತಿಯಾಗಿದ್ದು, ಪಾಕಿಸ್ತಾನವನ್ನು ಮುಗಿಸಿದರೇ ಕಾಂಗ್ರೆಸ್ ಮುಗಿಸಿದಂತಾಗುತ್ತದೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು. ಪ್ರಪಂಚದಲ್ಲಿರುವ ಮುಸ್ಲಿಂ ಸಮುದಾಯದವರೆಲ್ಲಾ ಭಯೋತ್ಪಾದಕರಲ್ಲ. ಆದರೇ ಈವರೆಗೂ ಸಿಕ್ಕಿರುವ ಭಯೋತ್ಪಾದಕರೆಲ್ಲಾ ಮುಸ್ಲಿಂ ಆಗಿದ್ದಾರೆ. ಪಾಕಿಸ್ತಾನಕ್ಕೆ ನಮ್ಮನ್ನು ಎದುರಿಸುವ ಶಕ್ತಿ ಇಲ್ಲ. ಆದರೇ ಶಕ್ತಿಯಾಗಿರುವವರು ನಮ್ಮ ದೇಶದಲ್ಲೇ ಇದ್ದಾರೆ. ಕಾಂಗ್ರೆಸ್ ಪಾಕಿಸ್ತಾನಕ್ಕೆ ಶಕ್ತಿಯಾಗಿದ್ದು, ಪಾಕಿಸ್ತಾನವನ್ನು ಮುಗಿಸಿದರೇ, ಕಾಂಗ್ರೆಸ್ ಅನ್ನು ಮುಗಿಸಿದಂತೇ ಎಂದು ದೂರಿದರು.