ನಾಗಮಂಗಲ: ಕಾಂಗ್ರೆಸ್ ಘೋಷಿಸಿರುವ ಗ್ಯಾರಂಟಿ ಯೋಜನೆಗಳು ಎಂದಿಗೂ ಹುಸಿಯಾಗುವುದಿಲ್ಲವೆಂಬ ನಂಬಿಕೆಯಿಂದ ಕ್ಷೇತ್ರದ ಜನರು ಪಕ್ಷಾತೀತವಾಗಿ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಎನ್.ಚಲುವರಾಯಸ್ವಾಮಿ ತಿಳಿಸಿದರು.
ತಾಲೂಕಿನ ಬೋಗಾದಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಜೆಡಿಎಸ್ ತೊರೆದ ಹಲವು ಮುಖಂಡರು ಹಾಗೂ ಕಾರ್ಯಕರ್ತರನ್ನು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಂಡ ನಂತರ ಮಾತನಾಡಿದ ಅವರು, ಐದು ವರ್ಷದಿಂದ ರಾಜ್ಯದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವಂತಹ ಯಾವುದೇ ಕಾರ್ಯಕ್ರಮ ಜಾರಿಯಾಗಿಲ್ಲ. ಅಲ್ಲದೆ ದೇಶಕ್ಕೆ ಅನ್ನನೀಡುವ ರೈತರ ಪರಿಸ್ಥಿತಿ ಹೇಳತೀರಾಗಿದೆ ಎಂದರು.
ಅಭಿವೃದ್ಧಿ ಜತೆಗೆ ಜನರ ಹಿತ ಕಾಯಬೇಕಿರುವುದು ಶಾಸಕರಾದವರ ಕರ್ತವ್ಯ ಮತ್ತು ಜವಾಬ್ದಾರಿ. ಆದರೆ ತಾಲೂಕಿನಲ್ಲಿ ಗುರುತಿಸ ಬಹುದಾದ ಅಭಿವೃದ್ಧಿ ಆಗಿಲ್ಲ. ಜನರ ಸಮಸ್ಯೆಗಳಿಗೂ ಪರಿಹಾರ ಸಿಗುತ್ತಿಲ್ಲವೆಂದರೆ ತಾಲೂಕಿನ ಜನರ ದುರ್ದೈವ ಎಂದರು.
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಮಹಿಳೆಯರಿಗೆ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ. ಉದ್ಯೋಗವಿಲ್ಲದೆ ವಿದ್ಯಾವಂತ ಯುವ ಸಮುದಾಯ ಕಂಗಾಲಾಗಿದೆ. ಹಾಗಾಗಿಯೇ ಪಕ್ಷದ ಮೇಲೆ ನಂಬಿಕೆಯಿಟ್ಟು ಬೇರೆ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ್ತಷ್ಟು ಶಕ್ತಿ ನೀಡಬೇಕೆಂದು ಮನವಿ ಮಾಡಿದರು.
ಮುಖಂಡರಾದ ಲಕ್ಷ್ಮೀನಾರಾಯಣ್ ಸೇರಿದಂತೆ ಗ್ರಾ.ಪಂ.ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.