ಹಾಸನ: ಬೇಲೂರು ಕಾಂಗ್ರೆಸ್ ಮುಖಂಡ ಹಾಗು ಉದ್ಯಮಿ ಗ್ರಾನೈಟ್ ರಾಜಶೇಖರ್ ಅವರು ಜಮೀನು ಖರೀದಿಸಿ ಭೂ ಮಾಲೀಕರಿಗೆ ಪೂರ್ತಿ ಹಣ ನೀಡದೆ ವಂಚಿಸಿದ್ದಾರೆಂದು ಆರ್‌ಪಿಐ ರಾಜ್ಯಾಧ್ಯಕ್ಷ ಸತೀಶ್ ಅವರು ಆರೋಪಿಸಿದರು.
ಬೇಲೂರು ತಾಲ್ಲೂಕಿನ ಮಾದಿಹಳ್ಳಿ ಹೋಬಳಿ ರಂಗನ ಕೊಪ್ಪಲು ನಿವಾಸಿ ಸಿದ್ದಯ್ಯ ಎಂಬುವವರಿಗೆ ಮೋಸ ಮಾಡಿದ್ದಾರೆ. ಸರ್ವೆ ನಂ.129ರ 1 ಎಕರೆ 20 ಗುಂಟೆ ಜಮೀನನ್ನು 15 ಲಕ್ಷ ರೂಪಾಯಿಗೆ ಖರೀದಿ ಮಾಡಲು ಮಾತುಕತೆ ನಡೆಸಿ ಕರಾರು ಪತ್ರ ಸಹ ಬರೆಸಿದ್ದರು. ಆದರೆ ಕೇವಲ 10 ಲಕ್ಷ ರೂ. ನೀಡಿ ಇನ್ನು 5 ಲಕ್ಷ ರೂ. ನೀಡದೆ ಸತಾಯಿಸುತ್ತಿದ್ದಾರೆಂದು ಸೋಮವಾರ ಸುದ್ದಿಗೋಷ್ಟಿಯಲ್ಲಿ ಆರೋಪಿಸಿದರು.
ಖರೀದಿ ಮಾಡಿರುವ ಜಮೀನಿಗೆ ಬದಲಾಗಿ ಬೇರೆಡೆ ಜಮೀನು ನೀಡುವುದಾಗಿ ಹೇಳಿದ್ದು ಈ ವರೆಗೂ ಬೇರೆಡೆ ಜಮೀನು ನೀಡಿಲ್ಲ. ಉಳಿಕೆ ಹಣದ 4 ಲಕ್ಷದ ಚೆಕ್ ಕೂಡ ಬೌನ್ಸ್ ಆಗಿದೆ. ಈ ಬಗ್ಗೆ ಖುದ್ದಾಗಿ ಅವರನ್ನೇ ವಿಚಾರಿಸಿದಾಗ ಹಣ ನೀಡುವುದಿಲ್ಲ, ಜೊತೆಗೆ ಬದಲಿ ಜಮೀನು ಕೊಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿದರು.
ಸಂತ್ರಸ್ತ ಸಿದ್ದಯ್ಯ ಅವರು ಮಾತನಾಡಿ, ಜಮೀನು ಖರೀದಿ ಮಾಡಿ ಸ್ವಲ್ಪ ದಿನದಲ್ಲೇ ನಡೆದ ಅಪಘಾತದಲ್ಲಿ ಪತ್ನಿ ಹಾಗು ಇಬ್ಬರು ಮಕ್ಕಳನ್ನು ಕಳೆದುಕೊಂಡ ನಾನು ಜಮೀನು ವಿಚಾರದ ಬಗ್ಗೆ ಗಮನ ಹರಿಸಲಿಲ್ಲ. ಇದನ್ನೇ ಅಸ್ತ್ರವಾಗಿ ಬಳಸಿಕೊಂಡ ಗ್ರಾನೈಟ್ ರಾಜಶೇಖರ್ ಅವರಯ ಉಳಿದ ಇನ್ನಸ್ಟು ಜಮೀನನ್ನು ವಶಪಡಿಸಿಕೊಂಡು ವಂಚನೆ ಮಾಡಿದ್ದಾರೆ ಎಂದು ಅಳಲು ತೋಡಿಕೊಂಡರು.
ಈ ಬಗ್ಗೆ ಹಳೇಬೀಡು ಪೊಲೀಸ್ ಠಾಣೆಗೆ ದೂರು ನೀಡಿ ಅನೇಕ ದಿನಗಳೇ ಕಳೆದರೂ ಪ್ರಕರಣ ದಾಖಲಿಸಿಲ್ಲ. ನನಗೆ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿದರು. ಸುದ್ದಿಗೋಷ್ಟಿಯಲ್ಲಿ ವಿಜಯ್ ಕುಮಾರ್, ಸಿದ್ದಯ್ಯ, ರಾಜೇಶ್, ಹರೀಶ್, ರಂಜಿತ್ ಕುಮಾರ್ ಇತರರು ಇದ್ದರು.