ಜಿಲ್ಲೆ

ಕಾಂಗ್ರೆಸ್ ಮತ್ತೆ ಅಧಿಕಾರಕ್ಕೇರಲ್ಲ

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಲೋಕಸಭೆ, ವಿಧಾನಪರಿಷತ್ ಚುನಾವಣೆಯಂತೆ ಮುಂದೆಯೂ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮುಂದುವರಿದರೆ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೇರುವುದಿಲ್ಲ ಎಂದು ಸಂಸದ ಡಾ.ಕೆ ಸುಧಾಕರ್ ಅಭಿಪ್ರಾಯಪಟ್ಟರು.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನೂತನ ಸಂಸದರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿ ಹೆಚ್ಚು ಲೀಡ್ ನೀಡಿದ್ದಾರೆ. ದೆಹಲಿಗೆ ಹೋಗಬೇಕೆನ್ನುವ ವಿಚಾರ ಮಾಡಿರಲಿಲ್ಲ. ದೇವರ ಆಶೀರ್ವಾದದಿಂದ ಹಳ್ಳಿಯಿಂದ ಡೆಲ್ಲಿವರೆಗೆ ಪ್ರಯಾಣ ಬೆಳೆದಿದೆ. ನನ್ನ ಅಧಿಕಾರಾವಧಿಯಲ್ಲಿ ನೀರಾವರಿ ಕ್ಷೇತ್ರಕ್ಕೆ ಆದ್ಯತೆ ನೀಡಿ ಶಾಶ್ವತ ಪರಿಹಾರ ನೀಡಲು ಶ್ರಮವಹಿಸಲಾಗುವುದು. ಅಲ್ಲದೆ, ಕಾರ್ಯಕರ್ತರಿಗೆ ಕೇಂದ್ರ ಸರ್ಕಾರದ ನಾಮಿನಿ ಸ್ಥಾನಗಳಿಗೆ ಆದ್ಯತೆ ನೀಡಿ ಅವಕಾಶ ನೀಡಲಾಗುವುದು. ಕೋಲಾರ, ಚಿಕ್ಕಬಳ್ಳಾಪುರ, ಬೆಂ.ಗ್ರಾಮಾಂತರ ಲೋಕಸಭಾ ಕ್ಷೇತ್ರಗಳು ಈ ಹಿಂದೆ ಕಾಂಗ್ರೆಸ್ ಭದ್ರಕೋಟೆಯಾಗಿದ್ದವು, ಆದರೆ 5 ವರ್ಷಗಳಲ್ಲಿ ಬಿಜೆಪಿ ವಶಪಡಿಸಿಕೊಳ್ಳುತ್ತಿದೆ. ಇದು ಹೀಗೆ ಮುಂದುವರಿಯಬೇಕಾದರೆ ಕಾರ್ಯಕರ್ತರಲ್ಲಿ ಭಿನ್ನಾಭಿಪ್ರಾಯ ತರುವುದು ಬೇಡ. ರಾಜ್ಯದಲ್ಲಿ ಮುಂದೆಯೂ ಮೈತ್ರಿ ಮುಂದುವರಿಯುತ್ತೆ. ತಾಲೂಕು, ಜಿಲ್ಲಾ ಪಂಚಾಯಿತಿಗಳಲ್ಲಿ ಹೆಚ್ಚಿನ ಶ್ರಮ ವಹಿಸುವ ಮೂಲಕ ಕಾಂಗ್ರೆಸ್ ಅನ್ನು ಅಧಿಕಾರದಿಂದ ದೂರವಿಡಬೇಕಿದೆ ಎಂದರು.
ಎಲ್ಲಿಯವರೆಗೂ ಮೈತ್ರಿ ಮುಂದುವರಿಯುತ್ತೆ ಅಲ್ಲಿವರೆಗೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಅನುಭವಕ್ಕಿಂತ ಹೆಚ್ಚಾಗಿ ಬದ್ಧತೆ ಇದೆ. ಮೊದಲ ಅಧಿವೇಶನ ಮುಗಿದ ಬಳಿಕ ಜನರ ಅಹವಾಲು ಕೇಳಲಾಗುವುದು. ಪ್ರತಿ ತಿಂಗಳ ಒಂದು ದಿನ ಜನರ ಸಮಸ್ಯೆ ಆಲಿಸಲಾಗುವುದು ಎಂದರು.
ಅವಕಾಶ ನೀಡಲಿ: ವಿಧಾನಸಭೆ, ಲೋಕಸಭೆ ಚುನಾವಣೆ ಮುಗಿದಿದೆ. ತಾಲೂಕು, ಜಿಪಂ ಚುನಾವಣೆಗಳು ಕಾರ್ಯಕರ್ತರ ಚುನಾವಣೆಯಾಗಿದೆ. ಶಾಸಕ, ಸಂಸದರು ಇಬ್ಬರೂ ಕಾರ್ಯಕರ್ತರಿಗಾಗಿ ಶ್ರಮಿಸುತ್ತೇವೆ. ಮುಂದಿನ ದಿನಗಳಲ್ಲಿ ಕೇಂದ್ರದ ನಿಗಮ ಮಂಡಳಿಗಳಲ್ಲಿ ಕಾರ್ಯಕರ್ತರಿಗೆ ಹೆಚ್ಚಿನ ಅವಕಾಶ ನೀಡಬೇಕು. ಕೇಂದ್ರದ ಮತ್ತು ರಾಜ್ಯದ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ ನೀಡಬೇಕು. ರಾಜ್ಯದ 28 ಸಂಸದರಲ್ಲಿ ಸುಧಾಕರ್ ಅವರು ಅತಿ ಉತ್ಸಾಹಿಯಾಗಿ ಕೆಲಸ ಮಾಡಬೇಕು ಎಂದು ಶಾಸಕ ಧೀರಜ್ ಮುನಿರಾಜು ಆಶಿಸಿದರು.
ಮಾತು ತಪ್ಪಿದರೆ
ಬದುಕಲು ನಾಲಾಯಕ್!: ಲೋಕಸಭಾ ಚುನಾವಣೆಯಲ್ಲಿ ಡಾ.ಕೆ.ಸುಧಾಕರ್ ಒಂದೇ ಒಂದು ಮತ ಲೀಡ್ ಪಡೆದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದ ಶಾಸಕ ಪ್ರದೀಪ್ ಈಶ್ವರ್ ಅವರ ದುರಂಹಕಾರದ ಪರಮಾವಧಿ ಮುಟ್ಟಿದೆ. ಅದೃಷ್ಟ ಬಲದಿಂದ ಪ್ರದೀಪ್ ಈಶ್ವರ್ ಒಮ್ಮೆ ಗೆದ್ದಿದ್ದಾರೆ. ತಾಕತ್ ಇದ್ದರೆ ಮತ್ತೊಮ್ಮೆ ಗೆಲ್ಲಲಿ. ಅವರು ಹೇಳಿದಂತೆ ಶಾಸಕ ಸ್ಥಾನಕ್ಕೆ ಪ್ರದೀಪ್ ಈಶ್ವರ್ ರಾಜೀನಾಮೆ ನೀಡಬೇಕು. ಇಲ್ಲವಾದಲ್ಲಿ ಬಿಜೆಪಿ ಕಾರ್ಯಕರ್ತರು ತಕ್ಕ ಉತ್ತರ ನೀಡಲಿದ್ದಾರೆ. ಯುವ ಮೋರ್ಚಾದಿಂದ ಪ್ರತಿಭಟನೆಗೆ ಕರೆ ನೀಡಲಾಗುವುದು. ಕೊಟ್ಟ ಮಾತು ತಪ್ಪಿದರೆ ಬದುಕಲಿಕ್ಕೆ ನಾಲಾಯಕ್ ಎಂದು ಶಾಸಕ ಧೀರಜ್ ಮುನಿರಾಜು ಆಕ್ರೋಶ ವ್ಯಕ್ತಪಡಿಸಿದರು.