ಶಹಾಬಾದ್: ನಗರಸಭೆಯ ಗದ್ದುಗೆ ಹಿಡಿಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದ್ದು, ಅಧ್ಯಕ್ಷ-ಉಪಾಧ್ಯಕ್ಷರಾಗಿ ಚಂಪಾಬಾಯಿ ಮಾನೆ- ಫಾತಿಮಾ ಬಾಕ್ರೋದ್ದಿನ್ ಆಯ್ಕೆಯಾದರು.
ಕಳೆದೊಂದು ವರ್ಷದಿಂದ ನನೆಗುದಿಗೆ ಬಿದ್ದಿದ್ದ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತು. ಅಧ್ಯಕ್ಷ ಅನುಸೂಚಿತ ಜಾತಿ ಹಾಗೂ ಉಪಾಧ್ಯಕ್ಷ ಹಿಂದುಳಿದ ವರ್ಗ (ಅ)ಕ್ಕೆ ಮೀಸಲಾಗಿತ್ತು. ಒಟ್ಟು 27 ಸದಸ್ಯರ ಬಲಾಬಲವಿದ್ದು, ಅಧ್ಯಕ್ಷ ಗಾದಿಗಾಗಿ ಕಾಂಗ್ರೆಸ್‌ನಿAದ ಚಂಪಾಬಾಯಿ ಹಾಗೂ ಬಿಜೆಪಿಯಿಂದ ರವಿ ರಾಠೋಡ್ ನಾಮಪತ್ರ ಸಲ್ಲಿಸಿದ್ದರು. ಚಂಪಾಬಾಯಿ 19 ಮತ ಪಡೆದು ಭರ್ಜರಿ ಗೆಲುವು ಸಾಧಿಸಿದರೆ, ರವಿ ರಾಠೋಡ್ ಕೇವಲ 5 ವೋಟ್ ಪಡೆದು ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಫಾತಿಮಾ ಒಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು.
ಸೇಡಂ ಸಹಾಯಕ ಆಯುಕ್ತ ಪ್ರಭು ರೆಡ್ಡಿ ಚುನಾವಣಾಧಿಕಾರಿಯಾಗಿ ಕೆಲಸ ನಿರ್ವಹಿಸಿದರು. ನಗರಸಭೆ ಪೌರಾಯುಕ್ತ ಡಾ.ಕೆ.ಗುರುಲಿಂಗಪ್ಪ, ಡಿವೈಎಸ್‌ಪಿ ಶಂಕರಗೌಡ ಪಾಟೀಲ್, ಸಿಪಿಐಗಳಾದ ಚಂದ್ರಶೇಖರ ತಿಗಡಿ, ನಟರಾಜ ಲಾಡೆ, ಪಿಎಸ್‌ಐ ಜಗದೀಶ ಕುಂಬಾರ ಇತರರು ಜತೆಗಿದ್ದರು.
ಎರಡು ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ವಿಜಯೋತ್ಸವ ನಡೆಸಿದರು. ಮಾಜಿ ಸಚಿವ ರೇವುನಾಯಕ ಬೆಳಮಗಿ, ಚುನಾವಣೆ ವೀಕ್ಷಕರೂ ಆದ ಕುಡಾ ಅಧ್ಯಕ್ಷ ಮಜರ್ ಆಲಮ್ ಖಾನ್, ಜಿಪಂ ಮಾಜಿ ಸದಸ್ಯರಾದ ಶಿವಾನಂದ ಪಾಟೀಲ್, ಸಂತೋಷ ಪಾಟೀಲ್, ಬಿಸಿಸಿ ಅಧ್ಯಕ್ಷ ಡಾ.ಎಂ.ಎ.ರಶೀದ್, ಪ್ರಮುಖರಾದ ಹಾಶಮ್ ಖಾನ್, ವಿಜಯಕುಮಾರ ಮುಟ್ಟತ್ತಿ, ಸುರೇಶ ನಾಯಕ, ಶರಣಗೌಡ ಪೊಲೀಸ್ ಪಾಟೀಲ್, ನಾಗರಾಜ ಸಿಂಘೆ, ರಾಜೇಶ ಯನಗುಂಟಿಕರ್, ಮೃತ್ಯುಂಜಯ ಸ್ವಾಮಿ ಹಿರೇಮಠ, ಕಿರಣಕುಮಾರ ಚವ್ಹಾಣ್, ಕಾಶೀನಾಥ ಜೋಗಿ, ನಾಗೇಂದ್ರ ನಾಟೀಕಾರ, ಮಹ್ಮದ್ ಜಲೀಲ್, ಫಜಲ್ ಪಟೇಲ್, ನಾಗಣ್ಣ ರಾಂಪುರೆ, ಶರಣು ಪಗಲಾಪುರ, ರಾಜ್ ಮಹ್ಮದ್ ರಾಜಾ ಇತರರಿದ್ದರು.