ಕೆಜಿಎಫ್: ತಾಪಂ ಅಧಿಕಾರ ಹಿಡಿಯುವಷ್ಟು ಬಹುಮತ ಹೊಂದಿದ್ದ ಬಿಜೆಪಿ ಸದಸ್ಯರ ಬಂಡಾಯದಿಂದಾಗಿ ಕಾಂಗ್ರೆಸ್‌ಗೆ ಅಧ್ಯಕ್ಷ ಗಾದಿ ಒಲಿದಿದೆ. ತಾಪಂ ಸದಸ್ಯ ಬಲ 13ರಲ್ಲಿ ಬಿಜೆಪಿ 8, ಕಾಂಗ್ರೆಸ್ 4 ಹಾಗೂ ಪಕ್ಷೇತರ 1 ಸ್ಥಾನ ಹೊಂದಿತ್ತು. ಸೋಮವಾರ ನಡೆದ ಅಧ್ಯಕ್ಷ (ಸಾ.ಮಹಿಳೆ) ಹಾಗೂ ಉಪಾಧ್ಯಕ್ಷ (ಪ.ಜಾತಿ) ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸುನಂದಮ್ಮ ರಾಮಕೃಷ್ಣರೆಡ್ಡಿ ಹಾಗೂ ಬಿಜೆಪಿಯಿಂದ ಭಾಗ್ಯಲಕ್ಷ್ಮೀ ಜಯರಾಮರೆಡ್ಡಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಗಿರಿಜಮ್ಮ ಉಮೇದುವಾರಿಕೆ ಸಲ್ಲಿಸಿದ್ದರು.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಏರ್ಪಟ್ಟಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ವಿ.ಸೋಮಶೇಖರ್ ಮತದಾನಕ್ಕೆ ಹಾಕಿದಾಗ ಸುನಂದಮ್ಮ 9 ಮತ ಪಡೆದು ಬಿಜೆಪಿ ಅಭ್ಯರ್ಥಿ ಭಾಗ್ಯಲಕ್ಷ್ಮಿ ಅವರನ್ನು 6 ಮತಗಳ ಅಂತರದಿಂದ ಪರಾಭವಗೊಳಿಸಿದರು. ಬಿಜೆಪಿಯ ಒಬ್ಬರು ಗೈರಾಗಿದ್ದರು. ಉಪಾಧ್ಯಕ್ಷ ಸ್ಥಾನ ಅವಿರೋಧ ಆಯ್ಕೆ ಕಂಡಿತು.
ಕೈ-ಬಿಜೆಪಿ ಮಧ್ಯೆ ವಾಗ್ವಾದ: ನಾಮಪತ್ರ ಸಲ್ಲಿಕೆ ನಂತರ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್ ವಿಪ್ ಜತೆಗೆ ತಾಪಂ ಕಚೇರಿ ಪ್ರವೇಶಿಸಲು ಅಧಿಕಾರಿಗಳ ಅನುಮತಿ ಕೇಳುತ್ತಿದ್ದಾಗ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪಿಸಿದ್ದರಿಂದ ಮಾತಿನ ಚಕಮಕಿ ನಡೆಯಿತು. ವೃತ್ತ ನಿರೀಕ್ಷಕ ಮುಸ್ತಾಕ್ ಪಾಷಾ ಹೊರನಡೆಯುವಂತೆ ಬಿಜೆಪಿ ಜಿಲ್ಲಾಧ್ಯಕ್ಷರಿಗೆ ತಾಕೀತು ಮಾಡಿ ಎರಡೂ ಪಕ್ಷದ ಕಾರ್ಯಕರ್ತರನ್ನು ಚದುರಿಸಿದರು.
ಬಿಜೆಪಿ ಸದಸ್ಯರಿಗೆ ವಿಪ್ ಜಾರಿ: ಚುನಾವಣೆ ಕೊಠಡಿಯಿಂದ ಹೊರಬಂದ ತಾಪಂ ಸದಸ್ಯ ಕೃಷ್ಣಮೂರ್ತಿ ಕೈಯಲ್ಲಿ ಜಿಲ್ಲಾಧ್ಯಕ್ಷರು ವಿಪ್ ಕಳುಹಿಸಿದ್ದರಾದರೂ ಬಂಡಾಯವೆದ್ದಿದ್ದ ಬಿಜೆಪಿ ಸದಸ್ಯರು ನೋಟಿಸ್‌ಗೆ ಕ್ಯಾರೇ ಎನ್ನದೆ ಕಾಂಗ್ರೆಸ್ ಅಭ್ಯರ್ಥಿಗೆ ಜೈ ಎಂದರು.
ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಶಾಸಕಿ ರೂಪಕಲಾ, ತಾಪಂ ಚುನಾವಣೆಯಲ್ಲಿ ಪಕ್ಷಭೇದ ಮರೆತು ಬಿಜೆಪಿ ಸದಸ್ಯರು ಕೈ ಅಭ್ಯರ್ಥಿ ಸುನಂದಮ್ಮ ಅವರನ್ನು ಬೆಂಬಲಿಸಿದ್ದಾರೆ. ಉಳಿದ ಅವಧಿಯಲ್ಲಿ ಪಕ್ಷತೀತವಾಗಿ ಜನಸೇವೆ ಮಾಡುವಂತೆ ತಿಳಿಸಿದರು. ತಾಪಂ ಇಒ ರವೀಂದ್ರ, ತಹಸೀಲ್ದಾರ್ ರಮೇಶ್ ಹಾಜರಿದ್ದರು. ಪಕ್ಷದ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಅನರ್ಹತೆಗೆ ದೂರು: ವಿಪ್ ಉಲ್ಲಂಘಿಸಿರುವ ಸದಸ್ಯರನ್ನು ಸದಸ್ಯತ್ವದಿಂದ ಅನರ್ಹಗೊಳಿಸಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ. ವೇಣುಗೋಪಾಲ್ ಚುನಾವಣಾಧಿಕಾರಿ ಸೋಮಶೇಖರ್‌ಗೆ ದೂರು ಸಲ್ಲಿಸಿದ್ದಾರೆ. ಈ ಸಂಬಂಧ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸುವುದಾಗಿ ಚುನಾವಣಾಧಿಕಾರಿ ತಿಳಿಸಿದ್ದಾರೆ.
ಮಾಸ್ಕ್ ಗುದ್ದಾಟ: ಜಿಲ್ಲಾ ಬಿಜೆಪಿ ಅಧ್ಯಕ್ಷರು ಕಚೇರಿಯೊಳಗೆ ಪ್ರವೇಶಿಸುವ ವೇಳೆ ಮೊದಲು ನೀವು ಮಾಸ್ಕ್ ಹಾಕಿಕೊಳ್ಳುವುದು ಕಲಿಯಿರಿ ಎಂದು ಪೊಲೀಸರು ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಹೇಳುತ್ತಿದ್ದಂತೆ ನಿಮ್ಮ ಪೊಲೀಸರಿಗೇ ಮಾಸ್ಕ್ ಧರಿಸಲು ಹೇಳಿ ಎಂದು ಬೊಟ್ಟು ಮಾಡಿದರು.
ಬಂಡಾಯವೆದ್ದವರ ವಾದವೇನು?: ಬಂಗಾರಪೇಟೆ ತಾಪಂಗೆ ಹಿಂದೆ ಅಧ್ಯಕ್ಷ ಚುನಾವಣೆ ವೇಳೆ 10 ತಿಂಗಳು ರಮೇಶ್ ಮಮತಾ ಹಾಗೂ ಎರಡನೇ ಅವಧಿಗೆ ಸುನಂದಮ್ಮಗೆ ಬಿಟ್ಟುಕೊಡುವ ಬಗ್ಗೆ ಒಪ್ಪಂದ ಆಗಿತ್ತು. 10 ತಿಂಗಳು ಪೂರ್ಣಗೊಂಡಿದ್ದರಿಂದ ಉಳಿದ 6 ತಿಂಗಳಿಗೆ ಸುನಂದಮ್ಮಗೆ ಸ್ಥಾನ ಬಿಟ್ಟುಕೊಡಬೇಕಿರುವುದು ನ್ಯಾಯವಾಗಿರುವುದರಿಂದ ಅವರನ್ನೇ ಬೆಂಬಲಿಸಿದ್ದಾಗಿ ಬಂಡಾಯವೆದ್ದ ಬಿಜೆಪಿ ಸದಸ್ಯರು ಪ್ರತಿಕ್ರಿಯಿಸಿದ್ದಾರೆ.
ಕೈ ಕೊಟ್ಟ ರಾತ್ರಿ ಕಾರ್ರ‌್ಯಾಚರಣೆ: ಭಾನುವಾರ ರಾತ್ರಿ ಗಡಿಭಾಗದ ಪೆಟ್ರೋಲ್ ಬಂಕ್ ಒಂದರಲ್ಲಿ ರಾತ್ರಿ ಒಂದು ಗಂಟೆ ಸಮಯದಲ್ಲಿ ಬಿಜೆಪಿ ಸದಸ್ಯರೊಂದಿಗೆ ಸಂಸದ ಎಸ್.ಮುನಿಸ್ವಾಮಿ ಮಾತುಕತೆ ನಡೆಸಿ ಒಗ್ಗಟ್ಟು ಕಾಯ್ದುಕೊಳ್ಳಲು ಸೂಚಿಸಿ ಇನ್ನೇನು ತಾಪಂ ಗೆದ್ದೇ ಬಿಟ್ಟೆವು ಎಂಬ ವಿಶ್ವಾಸದಿಂದ ವಾಪಸ್ ತೆರಳಿದ್ದರು. ಬೆಳಗಾಗುವುದರೊಳಗೆ ಶಾಸಕಿ ಎಂ.ರೂಪಕಲಾ ಆಪರೇಷನ್ ಹಸ್ತ ಮಾಡಿ ಶಾಕ್ ನೀಡಿದ್ದಾರೆ. ಸೋಲಿಗೆ ಸ್ಥಳೀಯ ನಾಯಕರನ್ನು ಬಿಜೆಪಿ ಕಡೆಗಣಿಸಿರುವುದೇ ಕಾರಣ ಎಂಬ ಚರ್ಚೆ ಬಿಜೆಪಿ ಪಾಳಯದಲ್ಲಿ ನಡೆದಿದೆ.